ಜಿಲ್ಲೆ

ತಂದೆಗೆ ಚಾಕುವಿನಿಂದ ಇರಿದ ಮಗ

ಲಲಾಟಾಕ್ಷ ಎಸ್

ತಿ.ನರಸೀಪುರ: ಆಸ್ತಿ ಬರೆದು ಕೊಡಲು ನಿರಾಕರಿಸಿದ ತಂದೆಯನ್ನು ಮಗನೇ ಸ್ನೇಹಿತರೊಂದಿಗೆ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ.


ಪುರಸಭೆ ವ್ಯಾಪ್ತಿಯ ಆಲಗೂಡು ಗ್ರಾಮದ ರಾಚಪ್ಪಾಜಿ (60) ಅವರ ಮಗ ಸುಭಾಷ್ ಚಾಕುವಿನಿಂದ ಹಲ್ಲೆ ಮಾಡಿದ್ದು ತಂದೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾರೆ. ಗಲಾಟೆ ತಡೆಯಲು ಬಂದ ರಾಚಪ್ಪಾಜಿ ಸ್ನೇಹಿತ ಮಹದೇವ ಅಮರ ಮೇಲೂ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.


ಸುಭಾಷ್ ತಂದೆಗೆ ಆಸ್ತಿ ನೀಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದ ರಾಚಪ್ಪಾಜಿ ಈಗಾಗಲೇ ಆಸ್ತಿಯನ್ನು ನೀಡಿ ನಾನು ನಿಮ್ಮಿಂದ ಬಿಡುಗಡೆ ಹೊಂದಿದ್ದೇನೆ. ನನ್ನ ಮುಂದಿನ ಜೀವನಕ್ಕೆ ಸ್ಪಲ್ಪ ಆಸ್ತಿ ಇಟ್ಟುಕೊಂಡಿದ್ದೇನೆ. ನಿಮಗೆ ಮತ್ತೆ ಆಸ್ತಿ ಕೊಡುವುದಿಲ್ಲ ಎಂದಿದ್ದಾರೆ. ಕುಪಿತನಾದ ಸುಭಾಷ್ ಸ್ನೇಹಿತರಾದ ಅಜಿತ್, ರಾಜೇಂದ್ರ, ಮಹೇಶ್, ಮಾದ ಜತೆ ಸೇರಿಕೊಂಡು ಮೂಲಸ್ಥಾನೇಶ್ವರ ಸ್ವಾಮಿ ದೇವಸ್ಥಾನದ ಬಳಿ ಇದ್ದ ತಂದೆ ರಾಚಪ್ಪಾಜಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದರು. ಸ್ಥಳದಲ್ಲಿದ್ದ ಮಹದೇವ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಆ ವೇಳೆ ಮಹದೇವ ಪುತ್ರ ಮನುನನ್ನು ಕಂಡು ಎಲ್ಲರೂ ಪರಾರಿಯಾಗಿದ್ದಾರೆ.


ಗಾಯಗೊಂಡು ಒದ್ದಾಡುತ್ತಿದ್ದ ಇಬ್ಬರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.