ಬಂಗಾರಪೇಟೆ: ಸೂಕ್ತ ದಾಖಲೆ ನಿರ್ವಹಿಸದ ತಾಲೂಕಿನ 7 ವಿವಿಧ ಪ್ರಮುಖ ಇಲಾಖಾ ಅಧಿಕಾರಿಗಳ ವಿರುದ್ಧ ಸುಮೋಟೊ ಕೇಸ್ ದಾಖಲಿಸಲಾಗುವುದು ಎಂದು ಉಪ ಲೋಕಾಯುಕ್ತ ವೀರಪ್ಪ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆಯಿಂದ ಸಂಜೆವರೆಗೂ 10 ಇಲಾಖೆಗಳ ಮೇಲೆ ದಾಳಿ ನಡೆಸಿದಾಗ 7 ಇಲಾಖೆಗಳಲ್ಲಿ ಸರಿಯಾದ ಮಾಹಿತಿ ನೀಡಿಲ್ಲ. ಹಾಗಾಗಿ ಕಂದಾಯ ಇಲಾಖೆ, ಸಬ್ ರಿಜಿಸ್ಟ್ರಾರ್, ಸಾರ್ವಜನಿಕ ಆಸ್ಪತ್ರೆ, ಪುರಸಭೆ, ತಾಲೂಕು ಪಂಚಾಯತಿ, ಸಿಡಿಪಿಒ, ಸರ್ವೇ ಇಲಾಖೆ ಎಡಿಎಲ್ಆರ್, ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಸುಮೊಟೋ ಕೇಸ್ ಹಾಕಲಾಗುವುದು ಎಂದರು.
ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವಾಟರ್ ಪ್ಲಾಂಟನ್ನು ಮಕ್ಕಳು ನೀರು ಕುಡಿಯಲು ಆಗದ ರೀತಿಯ ಎತ್ತರದಲ್ಲಿ ಫಿಕ್ಸ್ ಮಾಡಲಾಗಿದೆ. ಡಾಕ್ಟರ್ಗೆ ಸರಿಯಾಗಿ ಚಾರ್ಜ್ ಹಾಕಿಲ್ಲ. ವೈದ್ಯರು ಕೇಂದ್ರ ಸ್ಥಾನದಲ್ಲಿಲ್ಲದ ಕಾರಣ ದೂರು ದಾಖಲಿಸಲಾಗುವುದು ಎಂದರು.
ರೆಕಾಡ್ಸ್ ರೂಮ್ ಇನ್ಚಾರ್ಜ್ ವಿನೋದ್, ಎಡಿಎಲ್ಆರ್ ಪರಶಿವಮೂರ್ತಿ, ಸಬ್ ರಿಜಿಸ್ಟ್ರಾರ್ ಕಚೇರಿಯ ಮುರಳಿ ಹೊರ ಗುತ್ತಿಗೆ ನೌಕರ ವಿಜಯ್ಕುಮಾರ್ ಮೇಲೂ ಸುಮೊಟೋ ಕೇಸ್ ಹಾಕುತ್ತೇನೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಹೇಳಿಕೆ ಸಮಾಧಾನ ತಂದಿಲ್ಲ. ಒತ್ತುವರಿ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದ ಅವರು, ತಾಪಂನಲ್ಲಿ 1 ಕೋಟಿ ನರೇಗಾ ಯೋಜನೆ ಕಾಮಗಾರಿ ನಡೆದಿದೆ ಎಂದು ಇಒ ಹೇಳಿದ್ದಾರೆ. ಆದರೆ ಮಾಹಿತಿ ಕೊಟ್ಟಿಲ್ಲ. 2024-25 ಸಾಲಿನಲ್ಲಿ 10 ಕೋಟಿ ರೂ. ಅನುದಾನ ರ್ಖಚಾಗಿದೆ ಎಂದು ಸಿಡಿಪಿಒ ಹೇಳಿದ್ದಾರೆ. ಸರಿಯಾಗಿ ದಾಖಲೆ ನೀಡಿಲ್ಲ. ಕೃಷಿ ಅಧಿಕಾರಿ ಬಿಲ್ ಆಗೋ ಮೊದಲೇ ಬ್ಲಾಂಕ್ ಪೇಪರ್ ಮೇಲೆ ಸಹಿ ಹಾಕಿಸಲಾಗಿದೆ. ಅವರ ಕರ್ತವ್ಯ ಸಮಾಧಾನ ತಂದಿಲ್ಲ.ಹಾಗಾಗಿ ಇವರೆಲ್ಲರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದರು.