ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ನವದೆಹಲಿಯಲ್ಲಿ ಆಯೋಜಿಸಿರುವ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಬುಧವಾರ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು.
ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆ ಆವರಣದಿಂದ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಸಹ ಅಧ್ಯಕ್ಷರನ್ನು ಸಾರೋಟಿನಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಶ್ರೀ ಸತ್ಯಸಾಯಿ ಸಭಾಂಗಣದವರೆಗೆ ಡೊಳ್ಳು ಕುಣಿತ, ಕೋಲಾಟ, ಸೋಮನಕುಣಿತ, ಜನಪದ ನೃತ್ಯ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಕರೆದೊಯ್ಯಲಾಯಿತು. ಕನ್ನಡದ ಬಾವುಟ ಹಿಡಿದ ವಿದ್ಯಾರ್ಥಿಗಳು, ಹುಲಿವೇಷ ಕುಣಿತ, ಸೋಮನ ಕುಣಿತ, ರಂಗಕುಣಿತ, ಜಾನಪದ ಕಲಾ ತಂಡಗಳು ಮೆರುಗನ್ನು ಹೆಚ್ಚಿಸಿದವು. ಮಕ್ಕಳು ಕನ್ನಡ ನಾಡಿನ ಗಣ್ಯರ ವೇಷಭೂಷಣ ಧರಿಸಿ, ಕನ್ನಡ ಗೀತೆಗಳನ್ನು ಮೆರವಣಿಗೆಯುದ್ದಕ್ಕೂ ಹಾಡಿದರು.
ಸಮ್ಮೇಳನಾಧ್ಯಕ್ಷೆ ದೆಹಲಿಯ ಸುದೀತಿ ಅಂಬಳೆ, ಸಹ ಅಧ್ಯಕ್ಷರಾದ ನೂತನ ಕೈಕಾಡೆ, ಕೇರಳದ ಸ್ವಾತಿ ನಾಯಕ್, ಮಹಾರಾಷ್ಟ್ರದ ರಕ್ಷಿತಾ ಕಾಶೀನಾಥ ರಾಮತೀರ್ಥ, ಕರ್ನಾಟಕದ ರಕ್ಷಿತಾ, ವೆಂಕಟೇಶ ಕುಲಕರ್ಣಿ ಸಾರೋಟಿನಲ್ಲಿ ಸಾಗಿದರೆ, ಶಾಸಕ ಸಿ.ಎನ್.ಬಾಲಕೃಷ್ಣ, ಕುಸುಮಾ ಬಾಲಕೃಷ್ಣ, ಪರಿಷತ್ ಅಧ್ಯಕ್ಷ ಸಿ.ಎನ್.ಅಶೋಕ್, ಉದ್ಘಾಟಕರಾದ ಡಾ. ನಾ.ಸೋಮೇಶ್ವರ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ್, ದೆಹಲಿ ಕನ್ನಡಿಗರು ಭಾಗವಹಿಸಿದ್ದರು.