ವಿಜಯುವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಳೆದ ಸಾಲಿನಲ್ಲಿ ಬೇಸಿಗೆ ರಜೆ ವೇಳೆ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ಮುಂದುವರೆಸಿದ್ದ ಸರ್ಕಾರ ಈ ಬಾರಿಯೂ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ ಎನ್ನಲಾಗಿದ್ದರೂ ಇದುವರೆಗೆ ಈ ಬಗ್ಗೆ ಶಿಕ್ಷಣ ಇಲಾಖೆಗೆ ಅಧಿಕೃತ ಆದೇಶ ಬಂದಿಲ್ಲ.
ಕಳೆದ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಿ ಎರಡೂ ತಿಂಗಳ ಕಾಲ ಮಧ್ಯಾಹ್ನದ ಬಿಸಿಯೂಟ ಯೋಜನೆ ಮುಂದುವರೆಸಿತ್ತು ಅದೇ ರೀತಿ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಕಳೆದ ಸಾಲಿನಂತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಈ ಯೋಜನೆ ಜಾರಿಯಾಗಲಿದೆ ಅಥವಾ ಕೆಲವು ತಾಲೂಕುಗಳು ಪಟ್ಟಿಯಿಂದ ಹೊರಗುಳಿಯಲಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಇದು ಅಧಿಕೃತವಾಗದ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರದ ಆದೇಶವನ್ನು ಎದುರು ನೋಡುತ್ತಿದೆ.
ಮಕ್ಕಳಿಲ್ಲದಿದ್ದರೂ ಊಟ: ಕಳೆದ ಸಾಲಿನಲ್ಲಿ ಈ ಯೋಜನೆ ಸಾಕಷ್ಟು ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ಸಾಮಾನ್ಯವಾಗಿ ಬೇಸಿಗೆ ರಜೆಗಳಲ್ಲಿ ಶಾಲಾ ಮಕ್ಕಳು ಪ್ರವಾಸ, ಸಂಬಂಧಿಕರ ಮನೆ ಹೀಗೆ ವಾಸಸ್ಥಾನದಿಂದ ದೂರ ಇರುತ್ತಾರೆ. ಶಾಲೆಯ ಅಷ್ಟೂ ಮಕ್ಕಳ ಪೈಕಿ ಬೆರಳೇಣಿಗೆ ಮಕ್ಕಳಷ್ಟೇ ಸಿಗುತ್ತಾರೆ. ಅವರು ಸಹ ಪ್ರತಿದಿನ ಬರುವುದಿಲ್ಲ. ಆದ್ದರಿಂದ ಬಿಸಿಯೂಟ ಎಷ್ಟು ಮಕ್ಕಳಿಗೆ ತಯಾರಿಸಬೇಕು? ಎಷ್ಟು ಮಕ್ಕಳು ಬರುತ್ತಾರೆ ಎಂಬ ಗೊಂದಲದಲ್ಲಿ ಶಿಕ್ಷಕರು ಹೈರಾಣಾಗಿದ್ದರು. ಎಷ್ಟೂ ವೇಳೆ ಮಾಡಿದ ಊಟವನ್ನು ಗ್ರಾಮದ ಇನ್ನಿತರಿಗೆ ಕೊಟ್ಟ ಉದಾಹರಣೆಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಶಿಕ್ಷಕರು ಶಿಕ್ಷಣ ಇಲಾಖೆ ಮುಖ್ಯಸ್ಥರಿಗೆ ಮೌಕಿಕವಾಗಿ ಈ ಯೋಜನೆ ಉದ್ದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಜತೆಗೆ ಈ ವೇಳೆ ಅಡುಗೆ ಸಿಬ್ಬಂದಿಗೂ ಕೆಲಸ ಸಿಗುತ್ತದೆ ಎಂಬ ಆಶಾಭಾವನೆ ವ್ಯಕ್ತವಾದರೂ ಬೇಸಿಗೆ ರಜೆ ವೇಳೆ ಅಡುಗೆ ಸಿಬ್ಬಂದಿಯೂ ಸಿಗುತ್ತಿಲ್ಲ ಎಂಬ ಬಗ್ಗೆ ಸಾಕಷ್ಟು ದೂರುಗಳು ಎದುರಾಗಿದ್ದವು. ಈ ಬಾರಿ ಈ ಬಗ್ಗೆ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಶಾಲೆಯ ಮುಖ್ಯಶಿಕ್ಷಕರು ಎದುರು ನೋಡುತ್ತಿದ್ದಾರೆ.
ಸಂದಿಗ್ಧ ಸ್ಥಿತಿಯಲ್ಲಿ ಶಿಕ್ಷಕರು: ಸರ್ಕಾರಿ ಶಾಲಾ ಮಕ್ಕಳಿಗಷ್ಟೇ ಬಿಸಿಯೂಟ ವಿತರಿಸಬೇಕೆಂದು ಇಲಾಖೆ ಆದೇಶ ಹೊರಡಿಸಿತ್ತು. ಆದರೆ ವಾಸ್ತವವಾಗಿ ಸಂಬಂಧಪಟ್ಟ ಶಾಲೆಗಳ ಮಕ್ಕಳು ರಜೆ ವೇಳೆ ಬೇರೆ ಬೇರೆ ಕಡೆಗೆ ಹೊರಟಿದ್ದರು. ಅದೇ ರೀತಿ ಬೇರೆ ಕಡೆಯಿಂದ ಬಂದಿದ್ದ ಮಕ್ಕಳು ಬಿಸಿಯೂಟದ ವಿಷಯ ತಿಳಿದು ಸ್ಥಳಕ್ಕೆ ಬರುತ್ತಿದ್ದರು. ಇದರಿಂದ ಶಿಕ್ಷಕರು ಸಂದಿಗ್ಧ ಸ್ಥಿತಿ ಎದುರಿಸಿದ್ದರು. ಮಕ್ಕಳಿಗೆ ಊಟ ವಿತರಿಸುವ ವಿಷಯದಲ್ಲಿ ಶಿಕ್ಷಕ ವಲಯದಲ್ಲಿ ಸಾಕಷ್ಟು ಗೊಂದಲ ಏರ್ಪಟ್ಟಿತ್ತು.
ಬರಗಾಲವಿಲ್ಲ: ಕಳೆದ ಸಾಲಿನಲ್ಲಿ ತೀವ್ರ ಮಳೆ ಕೊರತೆಯಿಂದ ಸಾಕಷ್ಟು ತಾಲೂಕುಗಳಲ್ಲಿ ಬರಗಾಲ ತಾಂಡವವಾಡಿತ್ತು. ಆದರೆ ಈ ಬಾರಿ ಉತ್ತಮ ಮಳೆಯಿಂದಾಗಿ ಕಳೆದ ಸಾಲಿನಂತ ಪರಿಸ್ಥಿತಿ ಎದುರಾಗಿಲ್ಲ. ಆದ್ದರಿಂದ ಸರ್ಕಾರ ಈ ಯೋಜನೆ ಬಗ್ಗೆ ಅಳೆದು ತೂಗಿ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
-------------
ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳ ಅವಧಿಯ ಬೇಸಿಗೆ ರಜೆ ವೇಳೆ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮುಂದುವರಿಸುವ ಸಂಬಂಧ ವಿಷಯ ಹರಿದಾಡುತ್ತಿದ್ದರೂ ಇದುವರೆಗೆ ಸರ್ಕಾರದಿಂದ ಇಲಾಖೆಗೆ ಅಧಿಕೃತ ಆದೇಶ ಬಂದಿಲ್ಲ. ಈ ಬಗ್ಗೆ ಈಗಾಗಲೇ ಜಿಪಂ ಸಿಇಒ ಅವರ ಗಮನಕ್ಕೂ ತರಲಾಗಿದೆ. ಸರ್ಕಾರದ ಆದೇಶ ಏನು ಬರುತ್ತದೋ ಅದನ್ನು ಪಾಲಿಸಲಾಗುವುದು.
ಬೈಲಾಂಜಿನಪ್ಪ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಗ್ರಾಮಾಂತರ