ಸೋಮವಾರಪೇಟೆ: ಕಾಂಚನಾ ಗಂಗಾ ಕ್ರೀಡಾ ಸಂಸ್ಥೆ ಹಾಗೂ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಆಶ್ರಯದಲ್ಲಿ ಜೂನಿಯರ್ ಕಾಲೇಜಿನ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನದಲ್ಲಿ ಬೇಸಿಗೆ ಹಾಕಿ ಶಿಬಿರಕ್ಕೆ ಶಾಸಕ ಡಾ.ಮಂತರ್‌ಗೌಡ ಮಂಗಳವಾರ ಚಾಲನೆ ನೀಡಿದರು.
ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಅರೋಗ್ಯ ಬಹಳ ಮುಖ್ಯವಾದುದು. ಅದು ಕ್ರೀಡಾ ಚಟುವಟಿಕೆಗಳಿಂದ ಮಾತ್ರ ಸಿಗುತ್ತದೆ. ರಜಾ ದಿನಗಳಲ್ಲಿ ಸಮಯವನ್ನು ವ್ಯರ್ಥ ಮಾಡದೆ, ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಬೇಕು. ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕೊಡಗಿನಲ್ಲಿ ಹಾಕಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಆದರೂ ಇತರ ಕ್ರೀಡೆಗಳಲ್ಲೂ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಕ್ರೀಡಾ ಜಿಲ್ಲೆಗೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ತರಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸೋಮವಾರಪೇಟೆಯಲ್ಲಿ ಸೆಮಿ ಸಿಂಥೆಟಿಕ್ ಬಾಸ್ಕೆಟ್ ಬಾಲ್ ಒಳಾಂಗಣ ಕ್ರೀಡಾಂಗಣ ಮಾಡಲು ನಿರ್ಧಾರ ಮಾಡಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಪ್ರತಿಭೆಗಳಿದ್ದು ಅವರಿಗೆ ಸರಿಯಾದ ತರಬೇತಿ ಸಿಗುತ್ತಿಲ್ಲ. ಇದರಿಂದಾಗಿ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ವಿದ್ಯಾರ್ಥಿಗಳಿಗೆ ಹಾಕಿ ತರಬೇತಿ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಮೀಣ ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಟರ್ಫ್ ಮೈದಾನದಲ್ಲಿ ನುರಿತ ತರಬೇತುದಾರರಿಂದ ತರಬೇತಿ ಪಡೆದುಕೊಳ್ಳುವ ಅವಕಾಶಗಳನ್ನು ಕೈಚೆಲ್ಲಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಚನಾ ಗಂಗಾ ಕ್ರೀಡಾ ಸಂಸ್ಥೆ ಅಧ್ಯಕ್ಷ ಟಿ.ಪಿ. ಚಂಗಪ್ಪ, ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಿ.ಎ.ಲಾರೆನ್ಸ್ , ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಎಸ್.ಜಿ.ಮೇದಪ್ಪ, ನಂದಕುಮಾರ್, ಕೆ.ಟಿ.ಪರಮೇಶ್, ತರಬೇತುದಾರ ಬಿ.ಎಸ್.ವೆಂಕಟೇಶ್, ಅಂತೋಣಿ, ಬಿ.ಎಸ್.ಸುರೇಶ್ ಇದ್ದರು.