ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ
ಜಲ ಸಂಗ್ರಹಕ್ಕೆ ವಿವಿಧ ಉಪಕ್ರಮ
ಉಡುಪಿಯಲ್ಲಿ ಮೇ 20ರ ವರೆಗಿಲ್ಲ ಸಮಸ್ಯೆ
ಬೇಸಿಗೆ ಆರಂಭಗೊಂಡಿದ್ದು, ಹಲವೆಡೆ ಪ್ರಾರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಆದರೆ, ಉಡುಪಿ ಜಿಲ್ಲಾಡಳಿತ ಈ ಬಾರಿಯ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಉಡುಪಿ ನಗರಸಭೆಯೂ ಸಹ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕೊರತೆ ಆಗದಂತೆ ಕಾಳಜಿ ವಹಿಸಿದೆ. ಕಳೆದ ಮಳೆಗಾಲದ ಬಳಿಕ ನೀರು ಸಂಗ್ರಹಕ್ಕೆ ವಿವಿಧ ಉಪಕ್ರಮ ಅಳವಡಿಸಿದ್ದಲ್ಲದೆ, ನಗರಕ್ಕೆ ನೀರು ಪೂರೈಸುವ ಬಜೆ ಡ್ಯಾಂನಲ್ಲಿ ನೀರು ಸಂಗ್ರಹಕ್ಕೆ ವಿಶೇಷ ಮುತುವರ್ಜಿ ವಹಿಸಿದೆ.
ಬಜೆ ಡ್ಯಾಂನ ಎತ್ತರ ಹೆಚ್ಚಳ
ಉಡುಪಿ ನಗರ ವಾಸಿಗರಿಗೆ ನಿತ್ಯ ಕುಡಿಯುವ ನೀರು ಪೂರೈಸುವ ಬಜೆ ಡ್ಯಾಂ ಆಸರೆಯಾಗಿದೆ. ಬಿಸಿಲ ಝಳದಿಂದಾಗಿ ಡ್ಯಾಂನಲ್ಲಿ ನೀರು ಖಾಲಿಯಾದರೆ ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಿರಲಿಲ್ಲ. ಅದನ್ನರಿತ ನಗರಸಭೆ, ಬಜೆ ಡ್ಯಾಂನ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿದೆ. ಡ್ಯಾಂನ ನೀರು ಸಂಗ್ರಹ ಸಾಮರ್ಥ್ಯ 4.90 ಸೆಂ.ಮೀ. (ಎತ್ತರ) ಇದ್ದು, ಪ್ರಸಕ್ತ ವರ್ಷ ಡ್ಯಾಂ ಸುತ್ತಲೂ ಗೇಟ್ ಅಳವಡಿಸಿ 5.92 ಸೆಂ.ಮೀ.ಗೆ ಎತ್ತರಿಸಲಾಗಿದೆ. ಪ್ರಸ್ತುತ 5.92 ಸೆಂ.ಮೀ. ಎತ್ತರದವರೆಗೂ ನೀರು ಸಂಗ್ರಹಗೊಂಡಿದ್ದು, ಜಲಾಶಯ ಭರ್ತಿಯಾಗಿದ್ದು ಏಪ್ರಿಲ್ 20ರ ವರೆಗೂ ಯಾವುದೋ ತೊಡಕಿಲ್ಲದೆ ನಗರಕ್ಕೆ ನೀರು ಪೂರೈಸಬಹುದು.
ಕುಡಿಯುವ ನೀರಿಗಿಲ್ಲ ಕೊರತೆ
ನಗರಸಭೆಯ ವತಿಯಿಂದ 5 ಕೊಳವೆಬಾವಿಗಳಿಗೂ ಸಹ ಮಳೆ ನೀರು ಕೊಯ್ಲು (ವಾಟರ್ ಹಾರ್ವೆಸ್ಟಿಂಗ್) ಪ್ರಕ್ರಿಯೆ ಮಾಡಲಾಗಿದೆ. ಬಜೆ ಡ್ಯಾಂ ಅಷ್ಟೇ ಅಲ್ಲದೆ, ಶಿರೂರು ಡ್ಯಾಂನಲ್ಲಿಯೂ ನೀರು ಸಂಗ್ರಹವಿದ್ದು ಅದು ಮೇ 20ರ ವರೆಗೆ ಪೂರೈಕೆ ಮಾಡಬಹುದಾಗಿದೆ. ವಾರಾಹಿ ಯೋಜನೆಯಿಂದಲೂ ನೀರು ಸರಬರಾಜು ಆಗಲಿದ್ದು, ಉಡುಪಿ ನಗರದಲ್ಲಿ ಈ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆ ಆಗದು ಎನ್ನಲಾಗಿದೆ.
ವರಾಹಿ ನದಿಯಿಂದ ನೀರು ಪೂರೈಕೆ
ಉಡುಪಿ ನಗರಕ್ಕೆ ಬಜೆ ಡ್ಯಾಂನಿಂದ ಪ್ರತಿನಿತ್ಯ 28 ಎಂಎಲ್ಡಿ ನೀರು ಪೂರೈಸಲಾಗುತ್ತಿದೆ. ಆದರೆ, ಜನಸಂಖ್ಯೆಗೆ ಆಧರಿಸಿ ಈ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾರಾಹಿ ನದಿಯಿಂದಲೂ ನೀರು ಪೂರೈಸಲು 252 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. 2023ರಲ್ಲಿ ಮುಗಿಯಬೇಕಿದ್ದ ಕಾಮಗಾರಿ 2024ರ ಡಿಸೆಂಬರ್ ಅಂತ್ಯಕ್ಕೆ ಮುಗಿದಿದೆ. ನಿತ್ಯ 45 ಎಂಎಲ್ಡಿ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದ್ದು, ಉಡುಪಿ ನಗರ ಭಾಗದಲ್ಲಿ 250 ಕಿ.ಮೀ. ವಿತರಣಾ ಜಾಲದ ಕೆಲಸ ಮುಗಿದಿದೆ. ಹಾಲಾಡಿಯಿಂದ ಉಡುಪಿಗೆ (38 ಕಿಮೀ) ಎಂಎಸ್ ಪೈಪ್ ಹಾಗೂ ಉಡುಪಿ ನಗರದಲ್ಲಿ ಎಚ್ಡಿಪಿಇ ಪೈಪ್ ಜೋಡಿಸಲಾಗಿದೆ. ನಿತ್ಯ 20 ಎಂಎಲ್ಡಿ ನೀರು ಪೂರೈಕೆಯ ಪ್ರಾಯೋಗಿಕ ಪರೀಕ್ಷೆ ನಡೆದಿದೆ ಎಂದು ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದುರ್ಗಾಪ್ರಸಾದ್ ವಿಜಯವಾಣಿಗೆ ತಿಳಿಸಿದ್ದಾರೆ.
ಉಡುಪಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ವಾಡಿಕೆ ಮಳೆ 4,535 ಮಿ.ಮೀ. ಇದ್ದು, 5,261 ಮಿ.ಮೀ. ಸುರಿದು ಶೇ.16 ಹೆಚ್ಚು ಮಳೆಯಾಗಿದ್ದರಿಂದ ನೀರಿನ ಕೊರತೆಯಾಗದು. ಜಿಲ್ಲಾ ವಿಪತ್ತು ನಿರ್ವಹಣಾ ಪಿಡಿ ಖಾತೆಯಲ್ಲಿ 10.15 ಕೋಟಿ ರೂ. ಹಾಗೂ ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ವಿಪತ್ತು ಪಿಡಿ ಖಾತೆಯಲ್ಲಿ 1.53 ಕೋಟಿ ರೂ. ಅನುದಾನ ಲಭ್ಯವಿದ್ದು ಬರ ನಿರ್ವಹಣೆಗೂ ಹಣದ ಕೊರತೆ ಇಲ್ಲ.
| ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ