rtps 
ಜಿಲ್ಲೆ

- ಮಳೆಗಾಲದಲ್ಲಿ ಬೇಸಿಗೆಯ ಡಿಮಾಂಡ್, ತೀವ್ರ ಏರಿಕೆ ಕಂಡ ವಿದ್ಯುತ್ ಬೇಡಿಕೆ,  ಥರ್ಮಲ್ ಘಟಕಗಳಿಗೂ ಉತ್ಪಾದನೆಯ ಹೊರೆ

ರಾಯಚೂರು ರಾಜ್ಯದಲ್ಲಿ ಮಳೆಯ ಅಬ್ಬರ ತಗ್ಗಿದೆ. ಗಣೇಶೋತ್ಸವ ಸೇರಿ ನಾನಾ ಕಾರಣಗಳಿಂದ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಿದೆ. ಅಂತೆಯೇ ವಿದ್ಯುತ್ ಬೇಡಿಕೆಯೂ ಬೇಸಿಗೆಯ ರೀತಿ ಏರಿಕೆ ಕಂಡಿದೆ. ಪರಿಣಾಮ ರಾಜ್ಯದ ಕೆಲವೆಡೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತಕ್ಕೆ ಎಸ್ಕಾಂಗಳು ಮುಂದಾಗಿವೆ.

ರಾಜ್ಯದಲ್ಲಿ ಮಳೆಯ ಅಬ್ಬರ ಇಳಿಕೆಯಾಗಿದೆ. ಬಿಸಿಲ ತಾಪ ಹೆಚ್ಚಳ ಕಂಡಿದ್ದರಿಂದ ವಿದ್ಯುತ್ ಬಳಕೆ ತೀವ್ರಗತಿಯ ಏರಿಕೆಯಾಗಿದೆ. ಅದರಲ್ಲೂ ಗಣೇಶೋತ್ಸವದ ಕಾರಣಕ್ಕೆ ಗರಿಗೆದರಿದ್ದ ವಾಣಿಜ್ಯ ಚಟುವಟಿಕೆಯೂ ವಿದ್ಯುತ್ ಬಳಕೆ ಹೆಚ್ಚಳಕ್ಕೆ ದಾರಿ ಮಾಡಿದ್ದು ಬೇಡಿಕೆಯನ್ನು 14 ಸಾವಿರದಿಂದ 15 ಸಾವಿರ ಮೆವಾ ವರೆಗೆ ಕೊಂಡೊಯ್ದಿದೆ.

ಬೇಡಿಕೆ ಹೆಚ್ಚಳ

ಕಳೆದ ಜನವರಿ ಹಾಗೂ ಫೆಬ್ರವರಿಯಲ್ಲಿ ಸಾಮಾನ್ಯವಾಗಿ ವಿದ್ಯುತ್ ಬಳಕೆ ಏರಿಕೆಯಾಗಿತ್ತು. ರಾಜ್ಯದ ಅತೀ ಹೆಚ್ಚಿನ ವಿದ್ಯುತ್ ಬೇಡಿಕೆ 17000  ಮೆವಾ ಆಸುಪಾಸು ತಲುಪಿತ್ತು. ಈ ಬಾರಿ ಜೂನ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಕಳೆದ ಎರಡು ತಿಂಗಳಿಂದ ಥರ್ಮಲ್ ಘಟಕಗಳಿಗೆ ವಿಶ್ರಾಂತಿ ಸಿಕ್ಕಿತ್ತು. ಆದರೆ  ಸಾಲುಸಾಲು ಸರ್ಕಾರಿ ಹಬ್ಬದ ರಜೆಗಳು ಹೆಚ್ಚಳವಾಗಿವೆ. ಅದರಿಂದ ಕಳೆದ ಕೆಲ ದಿನಗಳಿಂದ ರಾಯಚೂರು ಸೇರಿ ರಾಜ್ಯದ ಮೂರು ಥರ್ಮಲ್ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ. ಪ್ರಸ್ತುತವಾಗಿ ರಾಯಚೂರಿನ ಆರ್ ಟಿಪಿಎಸ್ ನಲ್ಲಿ 774, ಬಿಟಿಪಿಎಸ್ ನಲ್ಲಿ 764, ವೈಟಿಪಿಎಸ್ ನಲ್ಲಿ 535 ಮೆವಾ ಉತ್ಪಾದನೆ ಮಾಡಲಾಗುತ್ತಿದೆ. ಜತೆಗೆ ಸೌರ ಹಾಗೂ ಪವನ ಸೇರಿ 6200 ಮೆವಾ ವಿದ್ಯುತ್ ಉತ್ಪಾದನೆ ಉತ್ಪಾದನೆಯಾಗುತ್ತಿದೆ.

ಕಾರಣ ಏನು?

ಈ ಭಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿ ಜುಲೈ ತಿಂಗಳಲ್ಲಿ ಸುಮಾರು 15 ಕ್ಕೂ ಅಧಿಕ ದಿನ ಮಳೆ ಇಲ್ಲದೆ ಬಿಸಿಲಿನ ತಾಪ ಹೆಚ್ಚಳವಾಗಿತ್ತು. ಜನರು ಪ್ಯಾನ್, ಎಸಿ ಮೊರೆ ಹೋಗಿದ್ದರು. ಆ.27 ರಂದು ರಾಜ್ಯಾದ್ಯಂತ ಗಣೇಶ ಉತ್ಸವ ನಿಮಿತ್ತ ವಿದ್ಯುತ್ ಬಳಕೆ ಜೋರಾಗಿತ್ತು ಮತ್ತು ವಾಣಿಜ್ಯ ಚಟುವಟಿಕೆ ಚುರುಕಾಗಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕಾರಣವಾಗಿದೆ.

ಬೇಸಿಗೆ ರೀತಿ ಬೇಡಿಕೆ-

ಬೇಸಿಗೆಯಲ್ಲಿ ಬೇಡಿಕೆಯು 14 ರಿಂದ 18 ಸಾವಿರ ಮೆವಾ ವರೆಗಿರುವುದು ಸಾಮಾನ್ಯ. ಮಳೆಗಾಲದಲ್ಲಿಯೂ ಬೇಡಿಕೆ ಈ ಹಂತಕ್ಕೆ ಏರಿಕೆ ಕಂಡಿರುವುದು ಅಚ್ಚರಿ ಮೂಡಿಸಿದೆ. ಹೀಗಾಗಿ ಕೆಪಿಸಿ ಪರಿಸ್ಥಿತಿ ನಿಭಾಯಿಸಲು ಥರ್ಮಲ್ ಘಟಕಗಳಿಗೆ ನೀಡಿದ್ದ ವಿಶ್ರಾಂತಿ ಕೊನೆಗೊಳಿಸಿ ಉತ್ಪಾದನೆಗೆ ತೊಡಗಿಸಿದೆ. ಆರ್ ಟಿಪಿಎಸ್‌ನಲ್ಲಿ ಎರಡು ಘಟಕಗಳಿಗೆ ಮಾತ್ರ ವಿಶ್ರಾಂತಿ ನೀಡಲಾಗಿದೆ. ಬಳ್ಳಾರಿಯ ಬಿಟಿಪಿಎಸ್‌ನಲ್ಲಿಯೂ ಎರಡು ಹಾಗೂ ವೈಟಿಪಿಎಸ್ ನ ಒಂದರಲ್ಲಿ ಉತ್ಪಾದನೆ ಚಾಲನೆ ನೀಡಲಾಗಿದೆ. ಜಲ ವಿದ್ಯುತ್  ಉತ್ಪಾದನೆಗೆ ಅವಕಾಶವಿದ್ದರೂ ಮುಂದಿನ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವ ಹೊಣೆ ಸರ್ಕಾರದ್ದಾಗಿದ್ದು ಈ ಕಾರಣಕ್ಕೆ ಸದ್ಯ ಥರ್ಮಲ್ ಘಟಕಗಳು ಹಾಗೂ ಸೌರ ಮತ್ತು ಪವನ ವಿದ್ಯುತ್ ಮೇಲೆಯೇ ಹೆಚ್ಚು ಹೊರೆ ಹಾಕಲು ಕೆಪಿಸಿ ಮುಂದಾಗಿದೆ.

ರಾಜ್ಯದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಕಳೆದ ಎರಡು ತಿಂಗಳಿಂದ ವಿಶ್ರಾಂತಿಯಲ್ಲಿದ್ದ ಥರ್ಮಲ್ ಕೇಂದ್ರಗಳನ್ನು ಬೇಡಿಕೆ ಹೆಚ್ಚಳದಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ. ಆರ್ ಟಿಪಿಎಸ್ ನಲ್ಲಿ ಪ್ರಸ್ತುತ 5 ಘಟಕಗಳಿಂದ 774 ಮೆವಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಸೂರ್ಯಕಾಂತ ಬಾಗಡೆ ಇಡಿ ಆರ್ ಟಿಪಿಎಸ್ ರಾಯಚೂರು.