ದೇವದುರ್ಗ:ಜಿಲ್ಲೆಯ ರೈತರ ಜೀವನಾಡಿ ನಾರಾಯಣಪುರ ಬಲದಂಡೆ ನಾಲೆಗೆ ನ.13ರಿಂದ ನೀರು ಬಂದ್‌ಆಗಲಿದೆ. ಎರಡನೇ ಬೆಳೆಗೆ ನೀರು ಹರಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳು ಸಿದ್ಧತೆ ನಡೆಸಿದ್ದು ಅಳೆದುತೂಗಿ ನೀರು ಬಿಡಲು ಮುಂದಾಗಿದ್ದಾರೆ. ನ.16ರಂದು ಐಸಿಸಿ ಸಭೆ ನಡೆಸಿ ನೀರುಬಿಡುವ ಬಗ್ಗೆ ಅಧಿಕೃತ ತೀರ್ಮಾನಕೈಗೊಳ್ಳಲಿದ್ದಾರೆ.
ಜುಲೈನಲ್ಲಿ ಜರುಗಿದ ಕೃಷ್ಣಾಭಾಗ್ಯ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯಲ್ಲಿ ಜು.17ರಿಂದ ನ.13ವರೆಗೆ ಬಲದಂಡೆ ನಾಲೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತ್ತು. ಅಲ್ಲದೆ ಒಳಹರಿವು ಇರುವವರೆಗೆ ವಾರಬಂಧಿ ಹಾಕದೆ ನಿರಂತರವಾಗಿ ನ.13ರವರೆಗೆ ನೀರು ಹರಿಸಲಾಗಿತ್ತು. ಇದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಿತ್ತು.
ಈಗ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಒಳಹರಿವು ಸಂಪೂರ್ಣ ಇಳಿದಿದೆ. ಎರಡನೇ ಬೇಸಿಗೆ ಬೆಳೆಗೆ ನೀರು ಹರಿಸುವ ಬಗ್ಗೆ ಆಲಮಟ್ಟಿಯಲ್ಲಿ ನ.16ರಂದು ಐಸಿಸಿ ಅಧ್ಯಕ್ಷ, ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಎರಡನೇ ಅವಧಿಗೆ ಡಿ.6ರಿಂದ 2,025 ಮಾ.30ರವರೆಗೆ ನೀರು ಹರಿಸುವ ಸಾಧ್ಯತೆಯಿದೆ. ಒಳಹರಿವು ಇಲ್ಲದ ಕಾರಣ 14ದಿನ ಚಾಲು ಹಾಗೂ 10ದಿನ ವಾರಬಂಧಿ ಪದ್ಧತಿ ಜಾರಿಗೊಳಿಸುವ ಸಾಧ್ಯತೆಯಿದೆ. ಆದರೆ, ರೈತರು 10ದಿನ ವಾರಬಂಧಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾಲೆ ನೀರು ನಂಬಿ ದೇವದುರ್ಗ, ಲಿಂಗಸುಗೂರು, ಸಿರವಾರ ಹಾಗೂ ರಾಯಚೂರು ತಾಲೂಕಿನ ರೈತರು ಭತ್ತ, ಮೆಣಸಿನಕಾಯಿ, ಹತ್ತಿ, ತೊಗರಿ ಸೇರಿ ಹಿಂಗಾರು ಬೆಳೆಹಾಕಿದ್ದಾರೆ. ಭತ್ತಕ್ಕೆ ಹೆಚ್ಚು ನೀರುಬೇಕಿದ್ದು ಬೆಳೆ ಕೈಸೇರಲು 120 ದಿನವಾಗಲಿದೆ. ಈ ಲೆಕ್ಕಚಾರದ ಪ್ರಕಾರ 70ದಿನಚಾಲು, 50ದಿನ ವಾರಬಂಧಿ ಸೇರಿ 120ದಿನ ನೀರು ಹರಿಸುವ ಸಾಧ್ಯತೆಯಿದೆ. ಆದರೆ, 10ದಿನ ನೀರು ಬಂದ್‌ಮಾಡಿದರೆ ಟೇಲೆಂಡ್ ಭಾಗದಲ್ಲಿ ಸಮಸ್ಯೆಯಾಗಲಿದ್ದು 8ದಿನಕ್ಕೆ ವಾರಬಂಧಿ ಇಳಿಸಲು ರೈತರು ಆಗ್ರಹಿಸಿದ್ದಾರೆ.
ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಎರಡೂ ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ 14ದಿನ ಚಾಲು, 8ದಿನ ಬಂದ್‌ನಂತೆ ಏ.10ವರೆಗೆ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಮೆಣಸಿನಕಾಯಿ, ಹತ್ತಿ, ತೊಗರಿಗೆ ವಾರದೊಳಗೆ ನೀರು ಹರಿಸಬೇಕು. ಟೇಲೆಂಡ್‌ಗೆ ನೀರುಬರಲು ಮೂರ‌್ನಾಲ್ಕು ದಿನವಾಗಲಿದ್ದು ಇದರಿಂದ ಬೆಳೆಗಳು ಹಾಳಾಗಲಿವೆ ಎನ್ನುವುದು ರೈತರ ವಾದವಾಗಿದೆ. ಇದರ ನಡುವೆ ಈವರ್ಷ ರೈತರಿಗೆ ಪೂರ್ಣಪ್ರಮಾಣ ನೀರು ಸಿಗುವ ವಿಶ್ವಾಸವಿದೆ.
ನೀರಿನ ಲೆಕ್ಕಾಚಾರ ಹೇಗೆ ?
ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸದ್ಯ ಒಳಹರಿವು ಬಂದ್‌ಆಗಿದೆ. ಸಂಗ್ರಹವಾದ ನೀರಿನ ಆಧಾರದಲ್ಲಿ ಪ್ರತಿದಿನ ಒಂದು ಟಿಎಂಸಿ ಅಡಿಯಂತೆ 70ದಿನ ನಾಲೆಗೆ ನೀರು ಹರಿಸುವ ಲೆಕ್ಕಾಚಾರವಿದೆ. ನಾರಾಯಣಪುರ ಡ್ಯಾಂನಲ್ಲಿ ಸುಮಾರು 30ಟಿಎಂಸಿ, ಆಲಮಟ್ಟಿಯಲ್ಲಿ ಅಂದಾಜು 70ಟಿಎಂಸಿ ಸೇರಿ ಒಟ್ಟು 110ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಅದರಲ್ಲಿ ಕುಡಿವ ನೀರು, ಕೈಗಾರಿಕೆಗಳ ಬಳಕೆ, ಭಾಸ್ಪೀಕರಣ (ಆವಿ), ಡೆಡ್‌ಸ್ಟೋರೇಜ್, ಆರ್‌ಟಿಪಿಎಸ್ ವಿದ್ಯುತ್ ಕೇಂದ್ರ ಹಾಗೂ ನದಿಯಲ್ಲಿರುವ ಜಲಚರ ಸೇರಿ 38.54ಟಿಎಂಸಿ ಅಡಿ ನೀರು ಮೀಸಲಿಡಲಾಗಿದೆ. ಉಳಿದ 70ಟಿಎಂಸಿ ಅಡಿ ನೀರನ್ನು 14ದಿನ ಚಾಲು, 10ದಿನ ವಾರಬಂಧಿ ಪ್ರಕಾರ ಬಿಡುವ ಸಾಧ್ಯತೆಯಿದೆ. ಪ್ರತಿನಿತ್ಯ 1ಟಿಎಂಸಿಯಂತೆ 70ದಿನ ಚಾಲು, 50ದಿನ ಬಂದ್ ಸೇರಿ 120ದಿನ ಅಂದರೆ ಮಾರ್ಚ್ ಕೊನೆವರೆಗೆ ನೀರು ಹರಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ರೈತರ ಸಭೆ ಮರೆತ ಶಾಸಕಿ ಪ್ರತಿವರ್ಷ ಐಸಿಸಿ ಸಭೆ ನಡೆಯುವ ಮುನ್ನ ಸ್ಥಳೀಯ ಶಾಸಕರು ರೈತರ ಸಭೆ ಕರೆದು ಅವರ ಸಲಹೆ, ಸೂಚನೆ ಪಡೆಯಬೇಕು. ಆದರೆ, ಎರಡು ವರ್ಷಗಳಿಂದ ಸ್ಥಳೀಯ ಶಾಸಕರು ರೈತರ ಸಭೆಯೇ ಕರೆದಿಲ್ಲ. ಈ ಹಿಂದಿನ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಪ್ರತಿ ಐಸಿಸಿ ಸಭೆಗೆ ಮುನ್ನ ತಾಲೂಕಿನ ರೈತರ ಸಭೆ ಕರೆದು ಅಭಿಪ್ರಾಯ ಪಡೆಯುತ್ತಿದ್ದರು. ಅದನ್ನು ಐಸಿಸಿ ಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದರು. ಆದರೆ, ಶಾಸಕಿ ಕರೆಮ್ಮ ಜಿ.ನಾಯಕ ಒಂದುಬಾರಿಯೂ ರೈತರ ಸಭೆ ಕರೆದಿಲ್ಲ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎರಡೂ ಜಲಾಶಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ನೀರಿನ ಸಂಗ್ರಹವಿದೆ. ಬೇಸಿಗೆ ಭತ್ತ ಕೈಸೇರಲು 2025 ಏಪ್ರಿಲ್ 10ರವರೆಗೆ ನೀರು ಹರಿಸಬೇಕು. 14ದಿನ ಚಾಲು, 8ದಿನ ವಾರಬಂಧಿ ಹಾಕಬೇಕು. 10ದಿನವಾರಬಂಧಿ ಮಾಡಿದರೆ ಟೇಲೆಂಡ್ ಭಾಗಕ್ಕೆ ನೀರು ಸಿಗದೆ ಮೆಣಸಿನಕಾಯಿ, ತೊಗರಿ, ಭತ್ತ ಹಾಳಾಗಲಿವೆ. ಐಸಿಸಿ ಸಭೆಗೆ ಮುನ್ನ ಶಾಸಕರು ರೈತರ ಸಭೆ ಕರೆದು ಸಲಹೆ, ಸೂಚನೆ ಆಲಿಸಬೇಕು. ಆದರೆ, ಶಾಸಕಿ ಸಭೆ ಕರೆಯುವುದನ್ನೇ ಮರೆತ್ತಿದ್ದಾರೆ. ಹೀಗಾಗಿ ಆಲಮಟ್ಟಿ ಐಸಿಸಿ ಸಭೆಗೆ ಹೋಗುತ್ತೇವೆ. ಆದರೆ, ಅಲ್ಲಿ ನಮ್ಮನ್ನು ಒಳಗೆ ಬಿಡದೆ ಅಧಿಕಾರಿಗಳು ದರ್ಪ ತೋರುತ್ತಾರೆ. ಪ್ರಭಾಕರ್ ಪಾಟೀಲ್ ಇಂಗಳದಾಳ ಜಿಲ್ಲಾಧ್ಯಕ್ಷ ರಾಜ್ಯ ರೈತ ಸಂಘ ಹಿಂದಿನ ಐಸಿಸಿ ಸಭೆ ತೀರ್ಮಾನದಂತೆ ನ.13ರಂದು ನಾಲೆಗೆ ನೀರು ಬಂದ್ ಮಾಡುತ್ತೇವೆ. ಬೇಸಿಗೆ ಬೆಳೆಗೆ 70ಟಿಎಂಸಿ ಅಡಿ ನೀರುಬೇಕು. ನಾನಾ ಉದ್ದೇಶಕ್ಕೆ 40ಟಿಎಂಸಿ ನೀರು ಕಾಯ್ದಿರಿಸಿ ಉಳಿದ 14ದಿನ ಚಾಲು, 10ದಿನ ವಾರಬಂಧಿ ಪದ್ಧತಿಯಂತೆ ಹರಿಸಲಾಗುವುದು. ಲೆಕ್ಕಾಚಾರದ ಪ್ರಕಾರ ಜಲಾಶಯದಲ್ಲಿ 4.5ಟಿಎಂಸಿ ಅಡಿ ನೀರಿನ ಕೊರತೆಯಿದೆ. ನ.16ರಂದು ಐಸಿಸಿ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು. ಪ್ರೇಮ್‌ಸಿಂಗ್ ಎಇಇ, ಕೃಷ್ಣಾಭಾಗ್ಯ ಜಲನಿಗಮ, ಬಿ.ಗುಡಿ ವಿಭಾಗ