ಸೋಮವಾರಪೇಟೆ: ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಸಾಂದೀಪನಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಲಿಖಿತ್ ತಿಳಿಸಿದರು.
ಯಶೋದೆ ರಂಗಶಿಕ್ಷಣ ಟ್ರಸ್ಟ್, ಸಾಂದೀಪನಿ ಆಂಗ್ಲಮಾಧ್ಯಮ ಶಾಲೆಯ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಅವಶ್ಯಕ, ಇದರಿಂದಾಗಿ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿಸುವ ಶಿಬಿರಗಳು ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಕೀಲ ಶ್ರೀನಿಧಿ ಮಾತನಾಡಿ, ವರ್ಷವಿಡೀ ತರಗತಿಯಲ್ಲಿ ಪಾಠಪ್ರವಚನ ಕೇಳಿದ ಮಕ್ಕಳಿಗೆ ಇಂತಹ ಶಿಬಿರಗಳು ಮಕ್ಕಳ ಚಟುವಟಿಕೆಗಳಲ್ಲಿ ಬದಲಾವಣೆ ತರಲಿವೆ ಆದ್ದರಿಂದ ಇಂತಹ ಶಿಬಿರಗಳು ಆಯೋಜನೆಗೊಳ್ಳಬೇಕು ಎಂದು ತಿಳಿಸಿದರು. ಸಾಂಸ್ಕೃತಿಕ ಚಟುವಟಿಕೆಗಳೊಡನೆ ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಹಾಗು ಕಲಿಸುವ ಕಾರ್ಯವಾಗಬೇಕೆಂದರು.
ಪತ್ರಕರ್ತ ಎಸ್.ಮಹೇಶ್, ವೈದ್ಯ ರಾಕೇಶ್ ಪಟೇಲ್, ಕಾಫಿ ಬೆಳೆಗಾರ ಸಜನ್ ಪೂವಯ್ಯ, ಶಿಕ್ಷಕಿ ವಸಂತಿ ವೇದಿಕೆಯಲ್ಲಿ ಇದ್ದರು.
ಶಿಬಿರದಲ್ಲಿ ಯಶೋಧೆ ರಂಗ ಟ್ರಸ್ಟ್ ಪದಾಧಿಕಾರಿ ನಿಶಾಂತ್ ಮುತ್ತಣ್ಣ, ಗಣೇಶ್ ಭೀಮನಕೋಣೆ, ಸಿದ್ದಾನ್ ವಿಜಯ್, ಮಾಲಾಶ್ರೀ ಗಾವಂಕರ್, ಕಾಜು ಗುತ್ತಲ್ ಅವರುಗಳು ಕಲಿಸಿಕೊಟ್ಟ ಹಾಡು, ನಾಟಕಗಳನ್ನು ಶಿಬಿರಾರ್ಥಿಗಳು ಪ್ರದರ್ಶಿಸಿ ಗಮನ ಸೆಳೆದರು.