ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಾಮಾನ್ಯವಾಗಿ ಇಂದಿನ ವಿದ್ಯಾರ್ಥಿಗಳು ಟಿವಿ, ಮೊಬೈಲ್‌ನ ಕಡೆ ಹೆಚ್ಚು ಆಕರ್ಷಿತರಾಗಿ ಅದನ್ನೇ ಗೀಳು ಮಾಡಿಕೊಂಡಿದ್ದಾರೆ. ಇದರಿಂದ ಹೊರಬಂದು ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳ ಗಮನ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮುದ್ದಣ್ಣ ಸಲಹೆ ನೀಡಿದರು.
ಜಿಲ್ಲಾ ರಾಜ್ಯ ಬಾಲಭವನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದೇವನಹಳ್ಳಿಯ ಮಕ್ಕಳಧಾಮ ಸಂಸ್ಥೆಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿ ದಿಸೆಯಲ್ಲಿ ಪಠ್ಯದಂತೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನ ನೀಡಬೇಕು ಶಾರೀರವಾಗಿ ಸದೃಡರಾಗಿರಬೇಕು, ಮಾನಸಿಕವಾಗಿ ಚುರುಕಾಗಿರಬೇಕು ಇದಕ್ಕೆ ಇಂಥ ಶಿಬಿರಗಳು ಪೂರಕವಾಗಲಿವೆ ಎಂದು ಹೇಳಿದರು. ಶಿಬಿರದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳಬೇಕು, ಇಲ್ಲಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಶಿಬಿರವನ್ನು 15 ದಿನಗಳವರೆಗೆ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಬೇಸಿಗೆ ಶಿಬಿರದಲ್ಲಿ ನೃತ್ಯ, ಕರಕುಶಲತೆ, ಜೇಡಿ ಮಣ್ಣಿನ ಕಲೆ, ಚಿತ್ರಕಲೆ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು ಇವುಗಳ ಕೌಶಲವನ್ನು ಕರಗತ ಮಾಡಿಕೊಳ್ಳಬಹುದು. ಆದ್ದರಿಂದ ಮಕ್ಕಳು ಈ ಶಿಬಿರವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಚಟುವಟಿಕೆಗಳಿಂದ ಕ್ರೀಯಾಶೀಲತೆ:
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ವಿ.ಮಹೇಶ್ ಮಾತನಾಡಿ ಮಕ್ಕಳು ಪಠ್ಯೇತರ ಚಟುವಟಿಕೆಗಳ ಶಿಬಿರಗಳಲ್ಲಿ ಭಾಗವಹಿಸಬೇಕು ಹಾಗೂ ಪಾಠದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಇದೊಂದು ಜಿಲ್ಲಾ ಮಟ್ಟದ ಬೇಸಿಗೆ ಶಿಬಿರವಾಗಿದ್ದು ಇಲ್ಲಿ ಹಲವು ನೈಪುಣ್ಯ ಪಡೆದವರು ವಿವಿಧ ಕಲೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಚಿತ್ರಕಲೆ, ಕರಕುಶಲತೆಗಳ ಬಗ್ಗೆ ತಿಳಿದು ಅದನ್ನು ಕರಗತ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.