ಜಿಲ್ಲೆ

ಕೊರೆವ ಚಳಿ, ಬಿಸಿಲಿಗೆ ಜನ ಹೈರಾಣ

ಸುನಿಲ್ ಪೊನ್ನೇಟಿ

ಮಡಿಕೇರಿ:

ಫೆಬ್ರವರಿ ಮೊದಲ ವಾರದಲ್ಲೇ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಕಾಣಿಸಿಕೊಂಡಿದೆ. ಬೆಳಗ್ಗೆ ಮತ್ತು ಸಂಜೆ ವಿಪರೀತ ಚಳಿ, ಹಗಲಿಡೀ ಸೆಖೆಯ ವಾತಾವರಣ ಜನರನ್ನು ಹೈರಾಣಾಗಿಸುತ್ತಿದೆ. ಇನ್ನು ಒಂದು ವಾರ ಮಳೆ ಬರುವ ಲಕ್ಷಣಗಳೇ ಇಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಫೆಬ್ರವರಿಯಲ್ಲಿ ಸಾಮಾನ್ಯವಾಗಿ ತಂಪು ವಾತಾವರಣ ಇರುವ ಕೊಡಗಿನಲ್ಲಿ ಬೇಸಿಗೆ ಕಾಲಿಡುವ ಮೊದಲೇ ಬಿಸಿಲಿನ ಝಳ ನೆತ್ತಿ ಸುಡುತ್ತಿದೆ. ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್‌ನಿಂದ 14 ಡಿಗ್ರಿ ಸೆಲ್ಸಿಯಸ್ ತನಕ ಕಂಡು ಬರುತ್ತಿದ್ದರೆ, 32 ಡಿಗ್ರಿ ಸೆಲ್ಸಿಯಸ್‌ನಿಂದ 33 ಡಿಗ್ರಿ ಸೆಲ್ಸಿಯಸ್ ತನಕ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಶನಿವಾರ ಮಡಿಕೇರಿಯಲ್ಲಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಬೆಟ್ಟ, ಗುಡ್ಡ, ಕಾಡುಗಳಿಂದ ಆವೃತವಾಗಿರುವ ಮಲೆನಾಡು ಪ್ರದೇಶದಲ್ಲಿ ಬೇಸಿಗೆ ಕಾಲಿಡುವ ಮೊದಲೇ ಇಂಥ ವಾತಾವರಣ ಚಿಂತನೆಗೆ ಹಚ್ಚಿದೆ.

ಕೆಲವೆಡೆ ಚಳಿ, ಮಂಜು ಕವಿದ ವಾತಾವರಣ ಇದ್ದರೂ ಬೆಳಗ್ಗೆ 10 ಗಂಟೆಯ ಸುಮಾರಿಗೆ ಸೂರ್ಯ ಪ್ರಜ್ವಲಿಸಲು ಶುರು ಮಾಡುತ್ತಾನೆ. ಮಧ್ಯಾಹ್ನ ನೆತ್ತಿ ಸುಡುವಂತಹ ಬಿಸಿಲಿನ ಅನುಭವ ಆಗುತ್ತಿದೆ. ಇನ್ನೂ ಒಂದು ವಾರ ಇದೇ ಸ್ಥಿತಿ ಇರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಾಗಿ ಆರೋಗ್ಯದ ಕಡೆಯೂ ಹೆಚ್ಚಿನ ಜಾಗ್ರತೆ ಅಗತ್ಯ ಎನ್ನುತ್ತಾರೆ ವೈದ್ಯರು.

ಹಾಸನ ಮತ್ತು ಮೈಸೂರು ಗಡಿಭಾಗದಲ್ಲಿರುವ ಜಿಲ್ಲೆಯ ಊರುಗಳಲ್ಲಿ ಗರಿಷ್ಠ ತಾಪಮಾನ ಈಗಾಗಲೇ 33 ಡಿಗ್ರಿ ಸೆಲ್ಸಿಯಸ್ ತಲುಪಿದೆ. ದಕ್ಷಿಣ ಕನ್ನಡದ ಗಡಿ ಮತ್ತು ಕೇರಳದ ಕಾಸರಗೋಡಿಗೆ ಹೊಂದಿಕೊAಡAತಿರುವ ಕರಿಕೆ ಮತ್ತಿತರ ಭಾಗಗಳಲ್ಲೂ ಬಿಸಿಲಿನ ತಾಪ ಬೆವರು ಹರಿಸುತ್ತಿದೆ. ಈ ಪ್ರದೇಶಗಳಿಗೆ ಹೋಲಿಸಿದರೆ ಮಡಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಷ್ಣಾಂಶ ಕಡಿಮೆ ಇದ್ದರೂ ಬೇಸಿಗೆಯ ಬಿಸಿ ಅನುಭವಕ್ಕೆ ಬರುತ್ತಿದೆ.

ಸಾಮಾನ್ಯವಾಗಿ ಆಗಾಗ್ಗೆ ಮೋಡ ಕವಿದ ವಾತಾವರಣ ಕಂಡು ಬರುವ ಜಿಲ್ಲೆಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು ಭಾಗಗಳಲ್ಲೂ ಮೋಡದ ಸುಳಿವು ಇಲ್ಲ. ಇದಕ್ಕೆ ಪೂರಕವಾಗಿ ಹವಾಮಾನ ಇಲಾಖೆಯೂ ಫೆ.12ರ ತನಕ ಮಳೆ ಬರುವುದಿಲ್ಲ ಎನ್ನುವ ಮಾಹಿತಿ ನೀಡಿದೆ. ಫೆ.12ರ ನಂತರ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದ್ದು, ಹಗಲಿನಲ್ಲಿ ಬಿಸಿಲಿನ ತಾಪ ಇನ್ನೂ ಒಂದು ವಾರ ಹೀಗೆಯೇ ಮುಂದುವರಿಯಲಿದೆ. ಮುಂದಿನ ತಿಂಗಳು ತಾಪಮಾನ ಇನ್ನೂ ಜಾಸ್ತಿಯಾಗುವ ಮುನ್ಸೂಚನೆ ಇದ್ದು, ಬೇಸಿಗೆಯ ಧಗೆ ಎದುರಿಸಲು ಈಗಲೇ ಸಿದ್ಧರಾಗಬೇಕಿದೆ.

ಬಿಸಿಲಿನ ತಾಪ ಹೆಚ್ಚಾಗಿರುವ ಸಂದರ್ಭದಲ್ಲಿ ರೋಗಾಣುಗಳು ಹೆಚ್ಚು ಕ್ರಿಯಾಶೀಲವಾಗಿದ್ದು, ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ ಮಕ್ಕಳು, ವಯಸ್ಸಾದವರ ಬಗ್ಗೆ ಜಾಗÊತಿ ಅಗತ್ಯ ಎನ್ನುತ್ತಾರೆ ವೈದ್ಯರು. ಸಾಂಕ್ರಾಮಿಕ ರೋಗಗಳ ಹಾವಳಿಯೂ ಈ ಸಂದರ್ಭದಲ್ಲಿ ಜಾಸ್ತಿ. ಕಾಲರಾ, ಟೈಫಾಯ್ಡ್, ಕಣ್ಣಿನ ತೊಂದರೆಗಳು, ಚಿಕನ್ ಫಾಕ್ಸ್, ಚರ್ಮ ಸಮಸ್ಯೆಗಳು, ವಾಂತಿ ಭೇದಿ, ನಿರ್ಜಲೀಕರಣ ಮತ್ತಿತರ ಸಮಸ್ಯೆಗಳು ಕಂಡುಬರುವುದರಿAದ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ ಎನ್ನುತ್ತಾರೆ ವೈದ್ಯರು.

ಬಿಸಿಲು ಹೆಚ್ಚಾದರೆ ಕೃಷಿಕರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಮುಂದಿನ 5 ದಿನಗಳ ಕಾಲ ಯಾವುದೇ ಮಳೆಯಿಲ್ಲದ ಕಾರಣ ಮಣ್ಣಿನ ತೇವಾಂಶದ ನಷ್ಟ ಹೆಚ್ಚಾಗುತ್ತದೆ. ನೀರಿನ ಒತ್ತಡ ತಪ್ಪಿಸಲು ಸರಿಯಾದ ಅಂತರದಲ್ಲಿ ನೀರಾವರಿ ಅತ್ಯಗತ್ಯ ಎನ್ನುವ ಸಲಹೆ ಕೊಡುತ್ತಾರೆ ಕೃಷಿ ತಜ್ಞರು.

ಸಾವಯವ ವಸ್ತುಗಳೊಂದಿಗೆ ಮಲ್ಚಿಂಗ್ (ಎಲೆಗಳು, ಒಣಹುಲ್ಲು, ಒಣಗಿದ ಹುಲ್ಲು) ಬಳಕೆ ಮಾಡುವುದರಿಂದ ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಆವಿಯಾಗುವಿಕೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಸಮರ್ಥ ನೀರಿನ ನಿರ್ವಹಣೆಗಾಗಿ ಹನಿ ಮತ್ತು ತುಂತುರು ನೀರಾವರಿಯನ್ನು ತಜ್ಞರು ಶಿಫಾರಸ್ಸು ಮಾಡುತ್ತಾರೆ. ಶುಷ್ಕ ಹವಾಮಾನವು ಥೈಪ್ಸ್, ಹುಳಗಳು, ಗಿಡಹೇನುಗಳು ಮತ್ತು ಕೊರಕಗಳನ್ನು ಹೆಚ್ಚಿಸಬಹುದು. ನಿಯಮಿತ ಸೌಟಿಂಗ್ ಮತ್ತು ತಡೆಗಟ್ಟುವ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು.

ನೇರ ಸೂರ್ಯನ ಬೆಳಕು ಮತ್ತು ನೀರಿನ ಒತ್ತಡದಿಂದ ಸಸ್ಯಗಳನ್ನು ರಕ್ಷಿಸಲು ಕಾಫಿ ಮತ್ತು ಏಲಕ್ಕಿಯಂತಹ ತೋಟದ ಬೆಳೆಗಳಲ್ಲಿ ನೆರಳು ನಿರ್ವಹಣೆ ಅಗತ್ಯ ಎನ್ನುವ ಸಲಹೆ ನೀಡುತ್ತಾರೆ.

ಬಿಸಿಲಿನಿಂದ ರಕ್ಷಣೆಗೆ ವೈದ್ಯರ ಸಲಹೆ

- ದ್ರವ ಆಹಾರÀ ಹೆಚ್ಚು ಸೇವನೆ

- ಹೊರಗೆ ಹೋಗುವಾಗ ಸನ್‌ಸ್ಕಿö್ರÃನ್ ಲೋಷನ್ ಬಳಕೆ, ಕನ್ನಡಕ, ಕೊಡೆ, ಕುಡಿಯುವ ನೀರು ಜೊತೆಗಿರಲಿ.

- ವಾಂತಿ-ಭೇದಿಯಾದರೆ ನಿಂಬೆ ಜ್ಯೂಸ್, ಎಳನೀರು, ಬಾಳೆಹಣ್ಣು, ಒಆರ್‌ಎಸ್ ಪೌಡರ್‌ನ ಜ್ಯೂಸ್ ಸೇವನೆ.

- ಡಯಾಬಿಟೀಸ್ ಪೀಡಿತರು ಮಜ್ಜಿಗೆ, ನೀರು, ಗಂಜಿ ಕುಡಿಯಬಹುದು.

- ಸಮತೋಲಿತ ಪೌಷ್ಠಿಕ ಆಹಾರ ಸೇವನೆ.

- ಕಣ್ಣಿನ ಸಮಸ್ಯೆಗಳು ಬಾರದಂತೆ ಸ್ವಚ್ಛತೆಗೆ ಆದ್ಯತೆ.

- ಕಾಯಿಸಿ, ಆರಿಸಿದ ನೀರನ್ನೇ ಕುಡಿಯಬೇಕು.

- ಹತ್ತಿಯ ಬಟ್ಟೆ ಧರಿಸಬೇಕು. ಬಿಳಿ ಬಟ್ಟೆಗೆ ಆದ್ಯತೆ ಕೊಡಬೇಕು.

- ಈ ಸಮಯದಲ್ಲಿ ಸಿಗುವ ಎಲ್ಲಾ ಹಣ್ಣುಗಳನ್ನು ತಿನ್ನಬಹುದು

- ಹಳೆಯ ಮತ್ತು ಹೊರಗಡೆಯ ಆಹಾರ ಬೇಡ.

- ಮಸಾಲೆ ಪದಾರ್ಥಗಳು, ಮಾಂಸಾಹಾರ, ಎಣ್ಣೆ ಪದಾರ್ಥ ಕಡಿಮೆ ಮಾಡಬೇಕು.

- ಕಲುಷಿತ ನೀರಿನಲ್ಲಿ ಐಸ್ ತಯಾರಿಕೆ ಸಾಧ್ಯತೆ ಇರುವುದರಿಂದ ಜ್ಯೂಸ್‌ಗೆ ಐಸ್ ಹಾಕಿಸಬೇಡಿ.

- ತಂಪು ಪಾನೀಯಗಳ ಸೇವನೆ, ಫ್ರಿಡ್ಜ್ನಲ್ಲಿಟ್ಟ ಆಹಾರ ಬೇಡ.

- ಚಿಕ್ಕ ಮಕ್ಕಳನ್ನು ದಪ್ಪನೆಯ ಬಟ್ಟೆಗಳಲ್ಲಿ ಸುತ್ತಿ ಮಲಗಿಸಬಾರದು.

- ಚಿಕ್ಕ ಮಕ್ಕಳಿಗೆ ಜ್ವರ ಬಂದರೆ ತಾಯಿಯ ಎದೆಹಾಲು ಆಗಾಗ ಕುಡಿಸಬೇಕು.

- ದೊಡ್ಡ ಮಕ್ಕಳಾದರೆ ನೀರು, ಹಣ್ಣಿನ ರಸ ಬಳಸಬೇಕು.

- ಈಜುಕೊಳಗಳ ಬಳಕೆ ಬಗ್ಗೆ ಎಚ್ಚರ ಇರಲಿ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಕೊಡಗು ಜಿಲ್ಲೆಯಲ್ಲಿ ಫೆ.8ರಿಂದ ಫೆ.12ರ ತನಕ

ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಸಾಧ್ಯತೆ ಇಲ್ಲ. ಗರಿಷ್ಠ ಉಷ್ಣಾಂಶ 32ಡಿ.ಸೆ. ನಿಂದ 33 ಡಿ.ಸೆ. ತನಕ ಇದ್ದರೆ, ಕನಿಷ್ಠ

ಉಷ್ಣಾಂಶ 13 ಡಿ.ಸೆ. ನಿಮದ 14 ಡಿ.ಸೆ. ಇರಲಿದೆ. ಈ ಸಂದರ್ಭದಲ್ಲಿ ಶೀತ ಒತ್ತಡದಿಂದ ಬೆಳೆಗಳನ್ನು ರಕ್ಷಿಸಬೇಕು. ಜಾನುವಾರುಗಳಿಗೆ ಸರಿಯಾದ ವಾತಾಯನ ವ್ಯವಸ್ಥೆ ಖಚಿತ ಪಡಿಸಿಕೊಳ್ಳಬೇಕು. ತರಕಾರಿ ಬೆಳೆಗಳಿಗೆ ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಳ್ಳಬೇಕು. ಹೆಚ್ಚು ನೀರಾವರಿ ತಪ್ಪಿಸಬೇಕು.

ಡಾ. ಜಿ.ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು