ಬೆಂಗಳೂರು : ಮಹಿಳೆಯರು, ಮಕ್ಕಳು, ಹಿರಿಯ ನಾಗರೀಕರು, ಅಬಲರು ಅನಾಥರು ಹೀಗೆ ಎಲ್ಲ ವರ್ಗದ ದುರ್ಬಲರಿಗೆ ಆಶ್ರಯ ಮತ್ತು ಬಲವನ್ನು ನೀಡಲು ಸ್ಥಾಪನೆಯಾಗಿ ಸೇವೆ ಸಲ್ಲಿಸುತ್ತಿರುವ ಸುಮಂಗಲಿ ಸೇವಾಶ್ರಮಕ್ಕೆ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಅ.30 (ಗುರುವಾರ) ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಸಂಸ್ಥಾಪಕಿ ಡಾ.ಎಸ್.ಜಿ.ಸುಶೀಲಮ್ಮ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮ ಸಾನ್ನಿಧ್ಯವನ್ನು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಭಾಲ್ಕಿ ಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ಹಾಗೂ ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಮಾಡಲಿದ್ದು, ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕ್ಷೇಮ ಕೃತಿ ಬಿಡುಗಡೆ ಮಾಡಲಿದ್ದಾರೆ. ಆಶ್ರಮ ನಡೆದು ಬಂದ ಹಾದಿ ಕುರಿತು ಗ್ರಂಥವನ್ನು ಸಚಿವ ಬಿ.ಎಸ್.ಸುರೇಶ್ ಬಿಡುಗಡೆ ಮಾಡಲಿದ್ದಾರೆ. ಯೋಗ ಪುಸ್ತಕವನ್ನು ರಾಜ್ಯಸಭಾ ಸದಸ್ಯ ಕೆ.ನಾರಾಯಣ ಬಿಡಗುಡೆ ಮಾಡಲಿದ್ದಾರೆ. ಹಿರಿಯ ಸಾಹತಿ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ಇನ್ನೂ ಅನೇಕ ಮಾಜಿ ಸಚಿವರು, ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಸುಶೀಲಮ್ಮ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಮಹಿಳಾ ಸುಸ್ಥಿರ ಬದುಕು ಎಂಬ ವಿಷಯದ ಕುರಿತು ವಿಚಾರ ಸಂಕಿರಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ಸಂದರ್ಭದಲ್ಲಿ ನಡೆಯಲಿವೆ.
ಸುದ್ದಿಗೋಷ್ಠಿಯಲ್ಲಿ ಸಾಹಿತಿಗಳಾದ ರು.ಬಸಪ್ಪ, ಇಂದಿರಾ ಕೃಷ್ಣಪ್ಪ, ಆಶ್ರಮದ ಸಂಸ್ಥಾಪಕಿ ಕಾಂತಮ್ಮ, ಪತ್ರಕರ್ತ ಗಂಗಾಧರ ಮತ್ತಿತರರಿದ್ದರು.