ಮೊಳಕೇರಾ ಗ್ರಾಮದಲ್ಲಿ ಉದ್ಘಾಟನೆಗೊಂಡಿರುವ ಸುಮನಬಾಯಿ ವೃದ್ಧಾಶ್ರಮ. 
ಜಿಲ್ಲೆ

ಹಿರಿಯರಿಗೆ ಸುಮನಬಾಯಿ ವೃದ್ಧಾಶ್ರಮ ಆಶ್ರಯ

ಸಂಜೀವಕುಮಾರ ಜುನ್ನಾ ಹುಮನಾಬಾದ್

ಮನೆಯಲ್ಲಿ ಮಕ್ಕಳು ನೋಡಿಕೊಳ್ಳದೆ ಅನಾಥಪ್ರಜ್ಞೆ ಎದುರಿಸುತ್ತಿರುವ ಹಿರಿಯ ಜೀವಿ (ವೃದ್ಧರು)ಗಳ ಆರೈಕೆಗಾಗಿ ಹೈದರಾಬಾದ್‌ನ ಮೈಥಿಲಿ ಚಾರಿಟೇಬಲ್ ಟ್ರಸ್ಟ್ ಅಡಿ ಮೊಳಕೇರಾ ಗ್ರಾಮದಲ್ಲಿ ವೃದ್ಧಾಶ್ರಮವೊಂದು ಕಾರ್ಯಾರಂಭ ಮಾಡಿದೆ.

ಪಟ್ಟಣದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಮೊಳಕೇರಾದ ಬಸವನಗರ ಬಡಾವಣೆಯಲ್ಲಿ ಟ್ರಸ್ಟ್ನ ಮುಖ್ಯ ದತ್ತಿ, ಮೂಲತಃ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದ ಅನಂತ ಪೂಜಾರಿ ಮಹಾರಾಜ ಅವರ ಮಾನವೀಯ ಕಾಳಜಿ ಫಲವಾಗಿ ಸುಮನಬಾಯಿ ವೃದ್ಧಾಶ್ರಮ ತಲೆ ಎತ್ತಿದೆ.

ಆಶ್ರಯ ಪಡೆಯಲು ಬಯಸುವ ವೃದ್ಧರಿಗೆ ಸಂಪೂರ್ಣ ಉಚಿತವಾಗಿರುವ ಆಶ್ರಮದಲ್ಲಿ ಎಂಟು ಹಾಸಿಗೆ, ವೆಸ್ಟರ್ನ್ ಶೌಚಗೃಹ, ಸ್ನಾನಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇನ್ನು ಆಶ್ರಮದಲ್ಲಿ ಉಳಿದುಕೊಳ್ಳುವ ಹಿರಿಯ ಜೀವಿಗಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಇರಲಿದೆ ಎಂದು ಮುಖ್ಯ ದತ್ತಿ ಅನಂತ ಪೂಜಾರಿ ತಿಳಿಸುತ್ತಾರೆ.

ಊರು ತೊರೆದು ಹೈದರಾಬಾದ್‌ನಲ್ಲಿ ನೆಲೆಸಿರುವ ಅನಂತ ಅವರು ೨೦೧೪ರಲ್ಲಿ ಮೈಥಿಲಿ ಕೆಮಿಕಲ್ಸ್ ಮತ್ತು ಟೆಕ್ನಾಲಜಿ, ಟೂರ್ಸ್ ಮತ್ತು ಟ್ರಾವೆಲ್ಸ್, ಮೀನಾಕ್ಷಿ ಏಂಟರ್‌ಪ್ರೈಜೆಸ್ ಆರಂಭಿಸಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಬರುವ ಆದಾಯದಲ್ಲಿ ಶೇ.೧೦ ಸಮಾಜೋಧಾರ್ಮಿಕ ಕಾರ್ಯಗಳಿಗೆ ಬಳಸುತ್ತಿರುವುದು ಪೂಜಾರಿಯವರ ಸೇವಾ ಕೈಂಕರ್ಯವನ್ನು ತೋರಿಸಿಕೊಡುತ್ತದೆ. ಈ ಹಿಂದೆ ಬೀದರ್ ಜಿಲ್ಲೆ ಚಳಕಾಪುರ, ರಾಜೇಶ್ವರ, ನಿಟ್ಟೂರ, ಮದರಗಾಂವ ಇತರ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸಹ ಸ್ಥಾಪಿಸಿದ್ದು ಗಮನಾರ್ಹ.

ಶಿವರಾತ್ರಿ ದಿನ ಸೇವೆಗೆ ಸಮರ್ಪಣೆ: ಮೊಳಕೇರಾದ ಬಸವನಗರ ಬಡಾವಣೆಯಲ್ಲಿರುವ ಸುಮನಬಾಯಿ ವೃದ್ಧಾಶ್ರಮ ಶಿವರಾತ್ರಿ ದಿನ ಹಿರಿಯ ಜೀವಿ ಸಂಬಣ್ಣ ಬೇಂದ್ರೆ ಅವರಿಂದ ಸೇವೆಗೆ ಸಮರ್ಪಣೆ ಮಾಡಲಾಗಿದೆ. ಪಂಡಿತ ಸಿಂಧೆ, ನಾಗೇಶ ಗಾಯಕವಾಡ, ಸುಶೀಲಾಬಾಯಿ ಗಾಯಕವಾಡ, ಶ್ರೀನಿವಾಸ, ರವಿ ಘಾವಳಕರ್, ಸವಿತಾ ನಾಗವಂಶಿ, ಮಹಾನಂದಬಾಯಿ ಬೆನಕಪಳ್ಳಿ, ಜಯಶ್ರೀ ಘಾವಳಕರ, ಕುನಾಲ್ ಆಶ್ರಮ ಆರಂಭಕ್ಕೆ ಸಾಕ್ಷಿಯಾಗಿದ್ದಾರೆ.

ವೃದ್ಧಾಶ್ರಮ ಸೇರಲು ಬಯಸುವವರು ತಮ್ಮ ಆಧಾರ್ ಕಾರ್ಡ್ ಹಾಗೂ ಕುಟುಂಬ ಅಥವಾ ಗ್ರಾಮ ಪಂಚಾಯಿತಿಯಿಂದ ಸಮ್ಮತಿ ಪತ್ರ ತರುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ ಮೊ.೮೫೫೫೯ ೧೧೦೬೮, ೯೮೮೦೫ ೪೦೬೬೬ಗೆ ಸಂಪರ್ಕಿಸಬಹುದು.
| ಅನಂತ ಪೂಜಾರಿ ಮಹಾರಾಜ ಮುಖ್ಯ ದತ್ತಿ, ಮೈಥಿಲಿ ಚಾರಿಟೇಬಲ್ ಟ್ರಸ್ಟ್