ಸುಲ್ತಾನಪುರ ಶ್ರೀಪಂಚಾಕ್ಷರಿ ಜಾತ್ರೆ ನಿಮಿತ್ತ ಶಂಭು ಸೋಮನಾಥ ಶಿವಾಚಾರ್ಯರ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ನಂದಿಕೋಲು ಸೇವೆ ಜರುಗಿತು. 
ಜಿಲ್ಲೆ

ಸುಲ್ತಾನಪುರದಲ್ಲಿ ಪಲ್ಲಕ್ಕಿ ಉತ್ಸವ ಅದ್ದೂರಿ

ನರೇಶ್ ಕುಮಾರ್

ದೇವದುಗ: ತಾಲೂಕಿನ ಸುಲ್ತಾನಪುರದ ಶ್ರೀಪಂಚಾಕ್ಷರಿ ಮಹಾಸಂಸ್ಥಾನ ತೀರ್ಥ ಬೃಹನ್ಮಠದಲ್ಲಿ ಪಂಚಾಕ್ಷರಿ ಜಾತ್ರೆ ನಿಮಿತ್ತ ಗುರುವಾರ ಪಲ್ಲಕ್ಕಿ ಉತ್ಸವ ಹಾಗೂ ನಂದಿಕೋಲು ಸೇವೆ ಜರುಗಿತು.

ಶ್ರೀಮಠದ ಪೀಠಾಧಿಪತಿ ಶಂಭು ಸೋಮನಾಥ ಶಿವಾಚಾರ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ 5ಗಂಟೆಗೆ ಸೋಮೇಶ್ವರ ಶಿವಲಿಂಗ ಹಾಗೂ ಪಂಚಾಕ್ಷರಿ ಶಿವಾಚಾರ್ಯರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ರಾಜರಾಜೇಶ್ವರಿಯ ಚಂಡಿಹೋಮ, ಕುಂಕುಮಾರ್ಚನೆ, ಮಹಾಮಂಗಳಾರತಿ ಜರುಗಿದವು. ನಂತರ ಶ್ರೀಗಳಿಂದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ, ಮುತ್ತೈದೆಯರಿಗೆ ಉಡಿತುಂಬವ ಕಾರ್ಯಕ್ರಮ ನೆರವೇರಿಸಲಾಯಿತು. ಬೆಳಗ್ಗೆ 10ಗಂಟೆಗೆ ಊರೊಳಗಿನ ಮಠದಿಂದ ಶ್ರೀಮಠದವರೆಗೆ ಪಲ್ಲಕ್ಕಿ ಉತ್ಸವ ಹಾಗೂ ನಂದಿಕೋಲು ಸೇವೆ ಜರುಗಿತು.

ಯಮನೂರು ಪುರವಂತಿಕೆ ಮೇಳ, ಮಹಿಳೆಯರು ಕುಂಭ ಕಳಸ ಹಾಗೂ ವಿವಿಧ ಗ್ರಾಮಗಳ ವಾದ್ಯಮೇಳ, ಡೊಳ್ಳಿನ ತಂಡ ಭಾಗವಹಿಸಿದ್ದವು. ಸಂಜೆ ಧರ್ಮಸಭೆಯಲ್ಲಿ ಚಿಂತಕ ಮಹಾದೇವಪ್ಪ ಗೊರೇಬಾಳ ಅವರು ಚಿಂತೆಯಿಂದ ಚಿಂತನದಕಡೆಗೆ ವಿಷಯ ಕುರಿತು ಉಪನ್ಯಾಸ ನೀಡಿದರು. ದೇವಸ್ಥಾನ ಆಡಳಿತ ಮಂಡಳಿ ಮುಖ್ಯಸ್ಥ ಪಂಚಯ್ಯಸ್ವಾಮಿ, ಭಕ್ತರಾದ ಚಂದ್ರಶೇಖರಯ್ಯ ಹಿರೇಮಠ, ರವಿಶಂಕರಯ್ಯ ಬೂದಿನಾಳ, ಚೋಳಯ್ಯ ಹಿರೇಮಠ, ರೆಡ್ಡೆಪ್ಪಗೌಡ, ಗಂಗನಗೌಡ ಇತರರಿದ್ದರು.