ಜಿಲ್ಲೆ

ಏಪ್ರಿಲ್ 8ರಂದು ದೇಶ ಉಳಿಸಿ ಸಂಕಲ್ಪ ಯಾತ್ರೆ ಸಮಾರೋಪ

ಮೈಸೂರು: ಕೋಮುಭಾವನೆಗಳನ್ನು ಕೆರಳಿಸಿ ದ್ವೇಷ ಬಿತ್ತುವವರ ವಿರುದ್ಧ ಜನಾಂದೋಲನ ರೂಪಿಸುವ ಸಲುವಾಗಿ ದೇಶ ಉಳಿಸಿ ಸಂಕಲ್ಪ ಯಾತ್ರೆಯ ಸಮಾರೋಪ ಏ.8ರಂದು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ ಎಂದು ದೇಶ ಉಳಿಸಿ ಸಂಕಲ್ಪ ಯಾತ್ರೆ ಸಂಯೋಜಕ ಆರ್.ನಾಗೇಶ್ ಅರಳಕುಪ್ಪೆ ತಿಳಿಸಿದರು.
ಬೆಳಗಾವಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಯಾತ್ರೆ ಸಮಾರೋಪಗೊಳ್ಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾತ್ರೆಯು ಮೂರು ಮಾರ್ಗಗಳಲ್ಲಿ ರಾಜ್ಯವ್ಯಾಪಿ ಸಂಚರಿಸುತ್ತಿರುವ ಸಂಕಲ್ಪ ಯಾತ್ರೆಯಾಗಿದೆ. ಅದರಲ್ಲಿ ಒಂದು ಈಗ ನಗರಕ್ಕೆ ಆಗಮಿಸಿದ್ದು, ಇಲ್ಲಿ ಸಮಾನ ಮನಸ್ಕರ ಸಭೆ ನಡೆಸಿ ಬಳಿಕ ಮಡಿಕೇರಿ ಮೊದಲಾದ ಮಾರ್ಗಗಳಲ್ಲಿ ತೆರಳಿ ಏ.8ರಂದು ಬೆಳಗಾವಿ ತಲುಪಲಿದೆ ಎಂದರು.
ಆಳುವ ಪಕ್ಷವನ್ನು ನಾವು ವಿರೋಧಿಸುತ್ತಿದ್ದೇವೆ ಎಂದ ಮಾತ್ರಕ್ಕೆ ವಿರೋಧ ಪಕ್ಷವನ್ನು ಕೊಂಡಾಡುತ್ತಿದ್ದೇವೆ ಎಂದಲ್ಲ. ಅದರ ವಿರುದ್ಧವೂ ಹೋರಾಡುತ್ತ ಬಂದಿದ್ದೇವೆ. ಆದರೆ ದೇಶದ ಜನರಿಗೆ ವಿಶ್ವಾಸದ್ರೋಹ ಬಗೆಯುತ್ತಿರುವ ಕೋಮುವಾದಿ ಬಿಜೆಪಿ ವಿರುದ್ಧ ಈಗ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಕ್ಕೆ ಬರಲು ಬೇಕಾದ ಯಾವುದೇ ಸಾಧನೆಯನ್ನು ಬಿಜೆಪಿ ಮಾಡಿಲ್ಲ. ಜಾತಿ, ಧರ್ಮಗಳ ನಡುವೆ ದ್ವೇಷ ಬೆಳೆಸುವ, ದೇಶವನ್ನು ಭಾವೋದ್ರೇಕಗೊಳಿಸಿ ಮತ ಕಬಳಿಸುವ ತಂತ್ರಗಾರಿಕೆ ಮಾರ್ಗಗಳನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.
ಆಯೋಜಕರಾದ ರಮೇಶ್ ಬೆಲ್ಲಂಕೊಂಡ, ಆಲಗೂಡು ಶಿವಕುಮಾರ್, ಕೆ.ವಿ.ಭಟ್, ಎಂ.ಎನ್.ಮಕುಂದರಾಜ್, ಹೊಸೂರು ಕುಮಾರ್, ಅಸಾದುಲ್ಲಾ ಮತ್ತಿತರರಿದ್ದರು.