ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಆಡಳಿತ ಅಧಿಕಾರಿಯಾಗಿದ್ದ ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ಪುತ್ತೂರಿನ ಐದನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ಅವರನ್ನು ದೋಷಿಗಳೆಂದು ತೀರ್ಪು ನೀಡಿದೆ.
ಪ್ರಕರಣದಲ್ಲಿ ಡಾ.ರೇಣುಕಾ ಪ್ರಸಾದ್ ಕೆ.ವಿ. ಸಹಿತ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ ಐದನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ನ್ಯಾಯಾಲಯದ ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಮೇಲ್ಮನವಿ ಪರಿಶೀಲಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ರೇಣುಕಾ ಪ್ರಸಾದ್, ಮನೋಜ್ ರೈ, ಎಚ್.ಆರ್.ನಾಗೇಶ್, ವಾಮನ ಪೂಜಾರಿ, ಶರಣ್ ಪೂಜಾರಿ ಮತ್ತು ಶಂಕರ ಅವರು ಕೃತ್ಯ ಎಸಗಿರುವುದು ಸಾಕ್ಷಾೃಧಾರಗಳ ಸಮೇತ ದೃಢಪಟ್ಟಿದೆ ಎಂದು ಕೊಲೆ ಮತ್ತು ಅಪರಾಧಿಕ ಒಳಸಂಚು ಅಪರಾಧ ಕೃತ್ಯದಲ್ಲಿ ದೋಷಿಗಳನ್ನಾಗಿ ತೀರ್ಪು ನೀಡಿದೆ. ಅ.5ರಂದು ಕೋರ್ಟಿಗೆ ಶರಣಾಗಲು ಅಪರಾಧಿಗಳಿಗೆ ಸೂಚನೆ ನೀಡಿರುವ ನ್ಯಾಯಾಲಯ, ಅಂದು ಶಿಕ್ಷೆ ಪ್ರಮಾಣ ಪ್ರಕಟಿಸುವ ಸಾಧ್ಯತೆ ಇದೆ. 7ನೇ ಆರೋಪಿ ಎಚ್.ನಾಗೇಶ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಏನಿದು ಪ್ರಕರಣ?: ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್‌ನ ಸಂಸ್ಥಾಪಕ ಕುರುಂಜಿ ವೆಂಕಟರಮಣ ಗೌಡ ಅವರಿಗೆ ವಯಸ್ಸಾದ ಮತ್ತು ಅನಾರೋಗ್ಯ ಕಾಡಿದ ಕಾರಣ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಹಿರಿಯ ಪುತ್ರ ಕೆ.ವಿ ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್ ಅವರಿಗೆ ವಿಭಜನೆ ಮಾಡಿ ಹಂಚಲಾಗಿತ್ತು. ಕೊಲೆಯಾದ ಎ.ಎಸ್. ರಾಮಕೃಷ್ಣ ಕೆವಿಜಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾಗಿದ್ದರು. ಚಿದಾನಂದ ಅವರ ಪರವಾಗಿ ಕೆವಿಜಿ ಮೆಡಿಕಲ್ ಕಾಲೇಜು ವ್ಯವಹಾರ ರಾಮಕೃಷ್ಣ ನೋಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನಗೊಂಡು ರೇಣುಕಾ ಪ್ರಸಾದ್ ಅವರು ರಾಮಕೃಷ್ಣ ಕೊಲೆಗೆ ಸುಪಾರಿ ನೀಡಿದ್ದರು ಎಂದು ಆರೋಪಿಸಲಾಗಿತ್ತು. 2011ರಲ್ಲಿ ರಾಮಕೃಷ್ಣ ಕೊಲೆಯಾಗಿದ್ದರು. ಪುತ್ತೂರು ನ್ಯಾಯಾಲಯ 2016ರಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಇದನ್ನು ಸರ್ಕಾರ 2017ರಲ್ಲಿ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.