ಸುಳ್ಯ: ಆಹಾರ ಅರಸಿ ನಾಡಿಗೆ ಬಂದು ತೋಟದ ಕೆರೆಗಿಳಿದು ಮೇಲೆ ಬರಲಾರದೆ ಸಂಕಷ್ಟಕ್ಕೆ ಸಿಲುಕಿದ್ದ ಆನೆಗಳಲ್ಲಿ ಮೂರು ಆನೆಗಳು ಮನುಷ್ಯರ ಸಹಾಯ ಪಡೆದು ಮರಳಿ ಕಾಡಿಗೆ ಸೇರಿದರೂ ಮರಿಯಾನೆ ಕಾಡು ಸೇರದೆ ನಾಡಿನಲ್ಲೇ ಉಳಿದಿದೆ.
ನಾಲ್ಕು ಆನೆಗಳು ಬುಧವಾರ ರಾತ್ರಿ ಅಜ್ಜಾವರದ ತುದಿಯಡ್ಕ ಎಂಬಲ್ಲಿ ಕೃಷಿ ತೋಟದ ಕೆರೆಗೆ ಇಳಿದಿದ್ದವು. ನೀರು ಹಾಗೂ ಕೆಸರು ತುಂಬಿದ ಕೆರೆಯಿಂದ ಮೇಲೆ ಬರಲಾರದೆ ಒದ್ದಾಡುತ್ತಿದುದ್ದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ನಿರಂತರ ಕಾರ್ಯಾಚರಣೆಯಿಂದ ಮರಿಯಾನೆ ಸೇರಿದಂತೆ ನಾಲ್ಕೂ ಆನೆಗಳನ್ನು ಮೇಲೆ ಬರುವಂತೆ ಮಾಡಲಾಯಿತು. ಬಳಲಿ ಎದ್ದೇಳಲೂ ಕಷ್ಟಪಡುತ್ತಿದ್ದ ಮರಿಯಾನೆಯನ್ನು ದೂಡಿಕೊಂಡೇ ಅರಣ್ಯದತ್ತ ಸಾಗಿಸಿದ್ದರು.
ಆದರೆ, ಮರಿಯಾನೆ ಇನ್ನು ಕೂಡ ತಾಯಿ ಆನೆ ಜತೆ ಸೇರಿಕೊಂಡಿಲ್ಲ. ತಾಯಿಯಿಂದ ಬೇರ್ಪಟ್ಟು ಅದು ರಸ್ತೆಯಲ್ಲೆಲ್ಲ ಓಡಾಡುತ್ತಿದೆ. ಇದರ ಹಿಂದೆಯೇ ಅರಣ್ಯ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಒಂದೆರಡು ಬಾರಿ ಅರಣ್ಯ ಇಲಾಖೆಯ ಸಿಬ್ಬಂದಿ ತಾಯಿ ಆನೆಯೊಂದಿಗೆ ಮರಿಯಾನೆಯನ್ನು ಸೇರಿಸಲು ಪ್ರಯತ್ನಪಟ್ಟರೂ ಯಶಸ್ವಿಯಾಗಲಿಲ್ಲ.
///ಕ್ವೋಟ್//
ಈಗ ಆನೆಗಳ ಹಿಂಡು ಸಮೀಪದ ಬೆಳ್ಳಪ್ಪಾರೆಯಲ್ಲಿದೆ. ನೀರು ಕುಡಿಯಲು ಮತ್ತೆ ತುದಿಯಡ್ಕದತ್ತ ಬಂದಾಗ ಮತ್ತೊಮ್ಮೆ ಮರಿಯಾನೆಯನ್ನು ತಾಯಿ ಆನೆಯೊಂದಿಗೆ ಸೇರಿಸುವ ಪ್ರಯತ್ನ ಮಾಡುತ್ತೇವೆ. ಮರಿ ಇಲಾಖೆ ಸಿಬ್ಬಂದಿಯ ಕಣ್ಗಾವಲಿನಲ್ಲೇ ಇದೆ. ತಾಯಿ ಆನೆಯೊಂದಿಗೆ ಸೇರಿಸಲು ಸಾಧ್ಯವಾಗದಿದ್ದರೆ ಮರಿಯಾನೆಯನ್ನು ಆನೆ ಶಿಬಿರಕ್ಕೆ ಕಳುಹಿಸಲಾಗುವುದು.
ಮಂಜುನಾಥ್ ಎನ್.
ಸುಳ್ಯ ವಲಯಾಧಿಕಾರಿ, ಅರಣ್ಯ ಇಲಾಖೆ