ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಹೊಸತನದ ಪ್ರೇರಕ ಶಕ್ತಿ ಮೂಡುತ್ತದೆ ಎಂದು ಶಾಸಕ ಶರತ್‌ಬಚ್ಚೇಗೌಡ ಹೇಳಿದರು.
ಹೋಬಳಿಯ ಬೆಂಡಿಗಾನಹಳ್ಳಿಯಲ್ಲಿ ಸೂಲಿಬೆಲೆ ಹಾಗೂ ಬೆಂಡಿಗಾನಹಳ್ಳಿ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ವಿದ್ಯಾರ್ಥಿಯಲ್ಲೂ ತನ್ನದೆ ಆದ ಹೊಸ ಹೊಸ ಆಲೋಚನಾ ಲಹರಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಇರುತ್ತದೆ. ಅವುಗಳನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಚಂದ್ರಯಾನ-3 ಯಶಸ್ವಿಯಾಗಿರುವುದು ವಿಶ್ವವೇ ಮೆಚ್ಚುವ ಸಾಧನೆ. ಇದು ದೇಶದ ವಿಜ್ಞಾನಿಗಳಿಂದ ಆಗಿದೆ ಎಂಬುದು ಪ್ರಶಂಸನೀಯ ವಿಚಾರ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಮಕ್ಕಳಿಗೆ ಆಸಕ್ತಿ ಇರುವ ಸಂಗೀತ, ನೃತ್ಯ, ಕರಾಟೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಕಾರಂಜಿಯಾಗಿ ಹೊರ ಹೊಮ್ಮಬೇಕು. ಈ ಕೆಲಸ ಶಿಕ್ಷಕರಿಂದ ಸಾಧ್ಯವಾಗಲಿದೆ. ಕಡು ಬಡತನದಲ್ಲಿ ಹುಟ್ಟಿದರೂ ವಿದ್ಯೆ ಎಂಬ ಆಸ್ತಿ ಗಳಿಸಬೇಕು. ದೇಶವೇ ಹೆಮ್ಮೆ ಪಡುವ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹನೀಯರನ್ನು ವಿದ್ಯಾರ್ಥಿಗಳಿಗೆ ಆದರ್ಶವಾಗಿಸಿಕೊಂಡು ಸಾಧನೆಯ ಗುರಿ ತಲುಪಬೇಕು ಎಂದರು.
ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಗುತ್ತಿಗೆದಾರ ದೇವರಾಜಪ್ಪ, ರಿಷಿಕುಲ್ ವಿದ್ಯಾಪೀಠದ ಸದಸ್ಯ ದೇವರಾಜ್, ದೊಡ್ಡಹರಳಗೆರೆ ಗ್ರಾಪಂ ಅಧ್ಯಕ್ಷೆ ನರಸಮ್ಮ, ಇಸಿಒ ರವಿಕುಮಾರ್, ಬಿಆರ್‌ಪಿ ನಾಗರಾಜ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಂಜುನಾಥ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಶ್ರೀನಿವಾಸಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಬೇಗೂರು ಸಿಅರ್‌ಪಿ ಸುಮಂಗಲಾ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಲ್ಲಾಬಕ್ಷ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ್, ಖಜಾಂಚಿ ಗಣಗಲೂರು ನಾಗರಾಜ್, ಸಂಘದ ನಿರ್ದೇಶಕರಾದ ಗಂಗಾಧರ, ಸುಬ್ಬರಾಯಪ್ಪ, ಭಾರತಿ, ಲಲಿತಮ್ಮ, ಆಶ್ವತ್ಥಮ್ಮ, ನಿರ್ಮಲಾ, ಉಷಾರಾಣಿ ಇತರರು ಇದ್ದರು.