ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಮಾನವ ಜನ್ಮ ಬಹುದೊಡ್ಡದು. ಜೀವನದಲ್ಲಿ ಪರರಿಗೆ ಸಹಾಯವಾಗುವಂತೆ ಜೀವಿಸಬೇಕು. ನಮ್ಮ ಆದರ್ಶ, ಸೇವೆ ಇತರರಿಗೆ ದಾರಿದೀಪವಾಗಬೇಕು ಎಂದು ಮಾಜಿ ಸಂಸದ ವೀರಪ್ಪ ಮೊಯ್ಲಿ ಹೇಳಿದರು.
ಪಟ್ಟಣದ ವಿವೇಕಾನಂದ ವಿದ್ಯಾಭಿವೃದ್ಧಿ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
ದೇಶ ಸ್ವಾತಂತ್ರ್ಯ ಪಡೆದಾಗ ಸಾಕ್ಷರತೆ ಪ್ರಮಾಣ ಕೇವಲ ಶೇ.14 ಮಾತ್ರ. ಬ್ರಿಟಿಷರು ನಮ್ಮನ್ನು ಗುಲಾಮರಂತೆ ಕಾಣುತ್ತಿದ್ದರು. ಶಿಕ್ಷಣದಿಂದ ವಂಚಿತರಾಗಿ ಮಾಡುವ ಮೂಲಕ ದಾಸ್ಯದಲ್ಲಿ ಇಟ್ಟುಕೊಂಡಿದ್ದರು. ಇಂದು ದೇಶ ಅಕ್ಷರ, ಆಹಾರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಕಂಡಿದೆ ಎಂದರು.
ಸ್ವಾತಂತ್ರ್ಯಕ್ಕಾಗಿ ಅನೇಕರು ವಿವಿಧ ಮಾರ್ಗದಲ್ಲಿ ಹೋರಾಟ ಮಾಡಿದರು. ಮಹಾತ್ಮ ಗಾಂಧಿ ಸತ್ಯ, ಅಹಿಂಸೆ, ಶಾಂತಿದೂತರಾಗಿ ಹೋರಾಟ ಮಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರ ಮಾರ್ಗದರ್ಶನದಲ್ಲಿ ನಡೆದ ಸೂ.ರಂ.ರಾಮಯ್ಯ ಅವರೂ ತಮ್ಮದೇ ಸೇವೆ ನೀಡಿದ್ದಾರೆ. ಈ ಶಾಲೆಯಲ್ಲಿ ಓದಿದ ಲಕ್ಷಾಂತರ ಜನ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಆರ್ಥಿಕ ಸಬಲತೆಗೆ ಶಿಕ್ಷಣವೇ ಶಕ್ತಿ ಎಂದರು.
ವಿವೇಕಾನಂದ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ವಿ.ಪ್ರಸಾದ್ ಮಾತನಾಡಿ,ಶಾಲೆ ಸಂಸ್ಥಾಪಕ ಸೂ.ರಂ.ರಾಮಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಪ್ರಥಮ ವಿಧಾನಸಭೆಯ ಸದಸ್ಯರಾಗಿ 1957 ರಿಂದ 1962ರ ವರಗೆ ಸೇವೆ ಸಲ್ಲಿಸಿದವರು. ಅವರು ನೀಡಿದ ಶಿಕ್ಷಣ ಕ್ರಾಂತಿ ಫಲ ಇಂದು ಈ ಶಾಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಂಡಿದ್ದಾರೆ. 104ನೇ ಜನ್ಮದಿನ ಹಾಗೂ ಶಾಲೆಯ 67ನೇ ಸಂಸ್ಥಾಪನ ದಿನ ಇದಾಗಿದೆ ಎಂದರು.
ಬೆಂಗಳೂರು ಬ್ಯಾಪಿಸ್ಟ್ ಆಸ್ಪತ್ರೆಯಿಂದ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಕರಾದ ಡಿ.ಲಕ್ಷ್ಮೀನಾರಾಯಣ್, ಡಿ.ನಾರಾಯಣಸ್ವಾಮಿ, ಶಂಕರರೆಡ್ಡಿ, ಅಂಬುಜಾಕ್ಷಿ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ನಿರ್ದೇಶಕ ತೋಟದಪ್ಪ, ಬಾಪಿಸ್ಟ್ ಆಸ್ಪತ್ರೆ ಸಾಮಾಜಿಕ ನಿರ್ವಹಣೆ ಮುಖ್ಯಸ್ಥ ಶಿವಾನಂದ್, ಮುಖಂಡರಾದ ಬೆಟ್ಟಹಳ್ಳಿ ಹೇಮಂತಗೌಡ, ಬೇಗೂರು ಅವೀನ್, ರವಿ, ರಮೇಶ್, ಶಿವಾನಂದ್, ರಾಮಕೃಷ್ಣ ರಾವ್, ಯರ‌್ರೇಗೌಡ, ಚರಣ್ ಕುಮಾರ್ ಇತರರು ಇದ್ದರು.