ಜಿಲ್ಲೆ

ಸುಳಗೇರಿಗೆ ಪ್ರಾರಂಭವಾಗದ ಬಸ್‌ ಸೌಲಭ್ಯ

Uttara Kannada - Subash Hegde

ಕಾರವಾರ: ಜೊಯಿಡಾ ತಾಲೂಕಿನ ಸುಳಗೇರಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಮರು ಪ್ರಾರಂಭವಾಗದೇ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾರವಾರ ತಾಲೂಕಿನ ಕದ್ರಾದಿಂದ 35 ಕಿಮೀ ದೂರದಲ್ಲಿ ಸುಳಗೇರಿ ಗ್ರಾಮವಿದೆ. ಊರು ಜೊಯಿಡಾ ತಾಲೂಕಿಗೆ ಸೇರಿದ್ದಾಗಿದ್ದರೂ ಕಾರವಾರ ತಾಲೂಕಿನ ಗ್ರಾಮಗಳ ಜತೆ ವ್ಯಾವಹಾರಿಕ ಸಂಪರ್ಕ ಹೊಂದಿದೆ. ಇದರಿಂದ ಕಾರವಾರದಿಂದ ಪ್ರತಿ ದಿನ ಒಂದು ಎನ್‌ಡಬ್ಲುಕೆಆರ್‌ಟಿಸಿ ಬಸ್ ಸುಳಗೇರಿ ಗ್ರಾಮಕ್ಕೆ ತೆರಳಿ ರಾತ್ರಿ ಉಳಿದು ಬೆಳಗ್ಗೆ ವಾಪಸಾಗುತ್ತಿತ್ತು. ಈ ವರ್ಷ ಮೇನಲ್ಲಿ ಭಾರಿ ಗಾಳಿ ಮಳೆಯ ಸಂದರ್ಭದಲ್ಲಿ ಚಲಿಸುತ್ತಿದ್ದ ಸುಳಗೇರಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದಿತ್ತು. ಪ್ರಯಾಣಿಕರು, ಸಿಬ್ಬಂದಿ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದರು. ಜುಲೈ 2 ರಂದು ಸುಳಗೇರಿ ಮಾರ್ಗದಲ್ಲಿ ಬಾಳೆಮನೆ ಸಮೀಪ ಗುಡ್ಡ ಕುಸಿದು ಬಿದ್ದಿತ್ತು. ಸುಳಗೇರಿಗೆ ತೆರಳಿದ ಹಾಲ್ಟ್ ಬಸ್ ಅಲ್ಲಿಯೇ ಸಿಕ್ಕಿ ಬಿದ್ದಿತ್ತು. ಸುಮಾರು 1 ತಿಂಗಳವರೆಗೂ ಗುಡ್ಡದ ಮಣ್ಣು ತೆರವು ಮಾಡದ ಕಾರಣ ಬಸ್ ಸುಳಗೇರಿ ನಿವಾಸಿಯಾಗಿತ್ತು. ಈ ಘಟನೆಗಳಿಂದ ಬೆದರಿದ ಎನ್‌ಡಬ್ಲುಕೆಆರ್‌ಟಿಸಿ ಸಿಬ್ಬಂದಿ ಸುಳಗೇರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ ಎಂಬ ಕಾರಣ ನೀಡಿ ಬಸ್ ಸಂಚಾರವನ್ನು ಎನ್‌ಡಬ್ಲುಕೆಆರ್‌ಟಿಸಿ ಪುನರಾರಂಭ ಮಾಡಿಲ್ಲ. ರಸ್ತೆಯಲ್ಲಿ ಭಾರಿ ವಾಹನ ತೆರಳಲು ನಿಷೇಧವಿದೆ ಎಂಬುದು ಸಾರಿಗೆ ನಿಗಮದ ಅಽಕಾರಿಗಳು ನೀಡುತ್ತಿರುವ ಕಾರಣ. ಗ್ರಾಮದಿಂದ ಹಲವು ವಿದ್ಯಾರ್ಥಿಗಳು ಕಾರವಾರ, ಕದ್ರಾಕ್ಕೆ ಬರುವವರಿದ್ದಾರೆ. ಅಲ್ಲದೇ ಉದ್ಯೋಗ, ಆಸ್ಪತ್ರೆ ಹಾಗೂ ಇತರ ವ್ಯವಹಾರಗಳಿಗೆ ಬರುವವರಿಗೂ ಅಡಚಣೆ ಉಂಟಾಗಿದೆ. ಶೀಘ್ರ ಬಸ್ ಓಡಾಟವನ್ನು ಪುನಃ ಪ್ರಾರಂಭ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಬಸ್ ವ್ಯವಸ್ಥೆ ಪುನರಾರಂಭ ಮಾಡುವಂತೆ ಗ್ರಾಪಂ ಕೂಡ ಸಾರಿಗೆ ನಿಗಮಕ್ಕೆ ಪತ್ರ ಬರೆದಿದೆ. ಅಲ್ಲದೇ, ಕೊಡಸಳ್ಳಿ ಅಣೆಕಟ್ಟೆಗೆ ಇದೇ ಮಾರ್ಗದಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಭಾರಿ ವಾಹನಗಳು ನಿತ್ಯ ಓಡಾಟ ನಡೆಸಿವೆ. ಜನರ ಓಡಾಟಕ್ಕೆ ಮಾತ್ರ ನಿಷೇಧದ ನೆವ ಏಕೆ ಎಂಬುದು ಗ್ರಾಮಸ್ಥರ ಪ್ರಶ್ನೆ.

ಎನ್‌ಡಬ್ಲುಕೆಆರ್‌ಟಿಸಿ ಕಾರವಾರ ಡಿಪೋ ಮ್ಯಾನೇಜರ್ಸೌಮ್ಯಾ ನಾಯಕ ಕದ್ರಾ-ಸುಳಗೇರಿ-ಕೊಡಸಳ್ಳಿ ರಸ್ತೆಯಲ್ಲಿ ಭಾರಿ ವಾಹನ ಓಡಾಟಕ್ಕೆ ಜಿಲ್ಲಾಽಕಾರಿ ಅವರು ನಿಷೇಧ ಹೇರಿದ್ದಾರೆ. ಅದನ್ನು ತೆರವು ಮಾಡುವವರೆಗೂ ನಮ್ಮ ಬಸ್ ಓಡಿಸಲು ಸಾಧ್ಯವಿಲ್ಲ.