ಜಿಲ್ಲೆ

ಸುಕ್ಷೇತ್ರ ಕಾರಡಗಿಯಲ್ಲಿ ಸಮಸ್ಯೆಗಳದೇ ಕಾರುಬಾರು

ವೀರೇಶ ಸೌದ್ರಿ

ಸವಣೂರ: ತಾಲೂಕಿನ ಕಾರಡಗಿ ಗ್ರಾಮದಲ್ಲಿ ಸ್ವಚ್ಛತೆ, ಬೀದಿದೀಪ ಸೇರಿ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಕಾರಡಗಿ ಗ್ರಾಮ ಎಂದಾಕ್ಷಣ ನೆನಪಿಗೆ ಬರುವುದು ಶ್ರೀವೀರಭದ್ರೇಶ್ವರ ದೇವಸ್ಥಾನ. ಇಂತಹ ಸುಕ್ಷೇತ್ರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಗ್ರಾಮದಲ್ಲಿ ಹಾದು ಹೋಗಿರುವ ಸವಣೂರು - ಹುಲಗೂರ ರಸ್ತೆಯ ಎರಡೂ ಬದಿ ಬರೀ ತ್ಯಾಜ್ಯ ತುಂಬಿದೆ.

ಹಲವಾರು ದಿನಗಳಿಂದ ಬೀದಿ ದೀಪ ಬೆಳಗುತ್ತಿಲ್ಲವಾದ್ದರಿಂದ ರಾತ್ರಿ ವೇಳೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.
ಗ್ರಾಮದಲ್ಲಿನ ಬಸ್ ತಂಗುದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಯೋಗ್ಯವಾಗಿಲ್ಲ. ಅಲ್ಲದೆ, ಅದು ಕುಡುಕರ ತಾಣವಾಗಿದೆ.
ಗ್ರಾಮದ ಕೆರೆಗೆ ಕಲುಷಿತ ನೀರು ಸೇರುತ್ತಿದೆ. ಕೆರೆಯ ನೀರನ್ನು ಕುಡಿದ ಜಾನುವಾರುಗಳು ವಿವಿಧ ಚರ್ಮ ರೋಗಗಳಿಗೆ ತುತ್ತಾಗುತ್ತಿವೆ.

ಇಂತಹ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಅನುಭವಿಸುತ್ತಿದ್ದರೂ ಪರಿಹರಿಸಲು ಗ್ರಾಪಂ, ತಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಸಮಸ್ಯೆ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುಕ್ಷೇತ್ರ ಕಾರಡಗಿ ಗ್ರಾಮವು ರಾಜ್ಯದಲ್ಲಿಯೇ ಹೆಸರುವಾಸಿ. ಇಂತಹ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ತಲೆ ಎತ್ತಿದ್ದು, ಸಂಬಂಧಿಸಿದವರು ಕೂಡಲೆ ಸರಿಪಡಿಸಬೇಕು.ಗದಿಗೆಪ್ಪ ಕುರವತ್ತಿ, ಶ್ರೀರಾಮ ಸೇನೆ ಧಾರವಾಡ ವಿಭಾಗ ಅಧ್ಯಕ್ಷ. ಗ್ರಾಮದಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ನಿರಂತರ ಮಳೆಯಿಂದಾಗಿ ತ್ಯಾಜ್ಯ ಪ್ರಮಾಣ ಹೆಚ್ಚಾಗಿದ್ದು, ಶೀಘ್ರವೇ ಸ್ವಚ್ಛತೆ ಕೈಗೊಳ್ಳಲಾಗುವುದು.ಪಿ.ಸಿ. ಸಂಕಪ್ಪನವರ, ಪಿಡಿಒ ಕಾರಡಗಿ