ಜಿಲ್ಲೆ

ನೌಕಾನೆಲೆ ಅಧಿಕಾರಿಗಳಿಂದ ಸುಕ್ರಿ ಗೌಡಗೆ ಸನ್ಮಾನ

ಅಂಕೋಲಾ: ಕದಂಬ ನೌಕಾನೆಲೆಯ ಐಎನ್‌ಎಸ್ ವಜ್ರಕೋಶದ ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಆರ್.ಕೆ. ಸಿಂಗ್ ಅವರು ತಾಲೂಕಿನ ಬಡಗೇರಿಯ ಪದ್ಮಶ್ರೀ ಸುಕ್ರಿ ಗೌಡ ಅವರ ಮನೆಗೆ ಸೋಮವಾರ ಸಂಜೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕ್ಯಾಪ್ಟನ್ ಆರ್.ಕೆ. ಸಿಂಗ್ ಮಾತನಾಡಿ, ಸುಕ್ರಿಜ್ಜಿಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅವರು ಪಡೆದ ಪುರಸ್ಕಾರಗಳನ್ನು ಕಂಡು ಸಂತೋಷ ಎನಿಸಿದೆ. ಹಾಲಕ್ಕಿ ಮಹಿಳೆಯರ ಜಾನಪದ ಹಾಡು ಆಲಿಸಿದ ಅವರು ತಮಗೆ ಭಾಷೆ ಅರ್ಥವಾಗದೆ ಇದ್ದರೂ ಹಾಡಿನ ಶೈಲಿ ಮನಸ್ಸಿಗೆ ಮುದನೀಡಿತು. ಪದ್ಮಶ್ರೀ ಸುಕ್ರಿಜ್ಜಿಯೊಂದಿಗೆ ಕದಂಬ ನೌಕಾನೆಲೆಯಲ್ಲಿ ಸುತ್ತುವ ಆಶೆಯಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಪದ್ಮಶ್ರೀ ಸುಕ್ರಿ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿರುವುದಾಗಿ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಕಾರವಾರ, ಭಾವಿಕೇರಿ ಗ್ರಾಪಂ ಸದಸ್ಯ ಧನಂಜಯ ನಾಯ್ಕ, ರವೀಶ ನಾಯ್ಕ ಬೆಲೇಕೇರಿ, ಐಎನ್‌ಎಸ್ ವಜ್ರಕೋಶದ ಸೈನಿಕರು ಉಪಸ್ಥಿತರಿದ್ದರು. ಇದೇ ವೇಳೆ ಮಾಧವ ನಾಯಕ ಕ್ಯಾಪ್ಟನ್ ಆರ್.ಕೆ. ಸಿಂಗ್ ಅವರೊಂದಿಗೆ ಮಾತನಾಡಿ, ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕೆಂದು ವಿನಂತಿಸಿದರು.