ಜಿಲ್ಲೆ

‘ಭಾಗ್ಯಲಕ್ಷ್ಮಿ’ ಇನ್ನು ‘ಸುಕನ್ಯಾ ಸಮೃದ್ಧಿ’

ಬೆಂಗಳೂರು : ಹೆಣ್ಣು ಮಗುವಿನ ಸ್ಥಾನ ಹೆಚ್ಚಿಸಲು, ಹೆಣ್ಣು ಮಗುವಿನ ಜನನ ಉತ್ತೇಜಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಹತ್ವಾಕಾಂಕ್ಷಿ ‘ಭಾಗ್ಯಲಕ್ಷ್ಮಿ’ ಬಾಂಡ್ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ’ ಮೂಲಕ ಮುಂದುವರಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಹೊರೆ ತಪ್ಪಿಸಿಕೊಂಡ ಸರ್ಕಾರ ಎಲ್‌ಐಸಿ ಬೇಡಿಕೆ ಈಡೇರಿಸಬೇಕಿದ್ದರೆ ಸರ್ಕಾರಕ್ಕೆ ವಾರ್ಷಿಕ 2 ಸಾವಿರ ಕೋಟಿ ರೂ. ಹೊರೆ ಹೊರಬೇಕಿತ್ತು. ಈ ಅಧಿಕ ಹೊರೆ ಹೊರುವುದರ ಬದಲು ಯೋಜನೆಯನ್ನು ಅಂಚೆ ಇಲಾಖೆಗೆ ವರ್ಗಾಯಿಸಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಿಲೀನಗೊಳಿಸಲು ಸಂಪುಟ ಸಭೆ ತೀರ್ಮಾನಿಸಿದೆ. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಜಾರಿಗೊಳಿಸಿದ್ದರು. ಪ್ರತಿವರ್ಷ ಲಕ್ಷಾಂತರ ಹೆಣ್ಣು ಮಕ್ಕಳು ಈ ಯೋಜನೆಗೆ ಸೇರ್ಪಡೆಯಾಗುತ್ತಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಎಲ್‌ಐಸಿ ಬದಲು ಅಂಚೆ ಇಲಾಖೆಗೆ ಈ ಯೋಜನೆಯ ಏಜೆನ್ಸಿಯನ್ನು ಈ ಹಿಂದೆಯೇ ನೀಡಲಾಗಿದ್ದು, ಅದಕ್ಕೆ ಈಗ ಸಂಪುಟ ಸಭೆ ಒಪ್ಪಿಗೆ ಪಡೆಯಲಾಗಿದೆ. ಯೋಜನೆಯನ್ನು ಸುಕನ್ಯಾ ಸಮೃದ್ಧಿಯೊಂದಿಗೆ ವರ್ಗಾಯಿಸಿದರೂ ‘ಭಾಗ್ಯಲಕ್ಷ್ಮಿ’ ಹೆಸರಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅಲ್ಲದೆ, ಲಾನುಭವಿಗೆ ದೊರೆಯುವ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ 1 ಲಕ್ಷ ರೂ. ಸಿಗುತ್ತದೆ.

ಎಲ್‌ಐಸಿಯಿಂದ ಸರ್ಕಾರಕ್ಕೆ ಒತ್ತಡ: ಬಡ್ಡಿದರ ಕಡಿಮೆ ಇರುವುದರಿಂದ 1 ಲಕ್ಷ ರೂ. ಕೊಡಲು ಎಲ್‌ಐಸಿ ಪದೇ ಪದೆ ತಕರಾರು ತೆಗೆದಿತ್ತಲ್ಲದೆ, ಕಡಿಮೆ ಬೀಳುವ ಹಣವನ್ನು ಸರ್ಕಾರ ಭರಿಸಕೊಡಬೇಕು ಎಂದು ಎಲ್‌ಐಸಿ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಈ ಕಾರಣಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಸುಕನ್ಯಾ ಸಮೃದ್ಧಿ ಯೋಜನೆ ಜತೆಗೆ ವರ್ಗಾಯಿಸಿ ಜಾರಿಗೊಳಿಸಲಾಗುತ್ತಿದೆ.