ಜಿಲ್ಲೆ

ಪಾರಂಪರಿಕ ಕುಲಧರ್ಮ ಬಿಡಬಾರದು...

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಸುಜ್ಞಾನೇಂದ್ರ ತೀರ್ಥ ಶ್ರೀಪಾದರ ಆರಾಧನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಾಲ್ಕು ವೇದಗಳಲ್ಲಿ ಶ್ರೀಕೃಷ್ಣನಿಗೆ ಸಾಮವೇದವೆಂದರೆ ಬಲು ಇಷ್ಟವಾಗಿತ್ತು. ಹೀಗಾಗಿ ಆ ವೇದವನ್ನು ಉಳಿಸಿದರೆ ಭಗವಂತನ ವಿಶೇಷ ಅನುಗ್ರಹ ಲಭಿಸುತ್ತದೆ. ಪಾರಂಪರಿಕವಾದ ಕುಲಧರ್ಮವನ್ನು ನಾವು ಬಿಡಬಾರದು. ಕುಲಧರ್ಮ ನಷ್ಟವಾದರೆ ಎಲ್ಲವೂ ನಾಶವಾದಂತೆ. ವೃತ್ತಿಯಲ್ಲಿ ನಾವುಗಳು ಬೇರೆ ಬೇರೆ ಉದ್ಯೋಗದಲ್ಲಿದ್ದರೂ ಸಹ ನಮ್ಮ ಮೂಲಧರ್ಮವನ್ನು ಬಿಡಬಾರದು. ಸ್ವಸ್ಯ ಶಾಖಾ ಅಧ್ಯಯನಗಳನ್ನು ಉಳಿಸುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ವಿದ್ಯಾವಲ್ಲಭ ಶ್ರಿ ಹಾಗೂ ಸಜ್ಞಾನೇಂದ್ರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವದ ನಿಮಿತ್ತ ಉಡುಪಿಯ ರಾಜಾಂಗಣದಲ್ಲಿ ಜುಲೈ 22ರಂದು ಸಂಜೆ ಆಯೋಜಿಸಿದ್ದ ಕೃಷ್ಣ ಗೀತಾನುಗ್ರಹ ಪ್ರಶಸ್ತಿ, ದತ್ತಿನಿಧಿ ಸಮರ್ಪಣೆ ಹಾಗೂ ಗೀತಾ ಚಿಂತನೆ ಉಪನ್ಯಾಸದ ಮಂಗಳೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಸಾಮಗಾನ ಪ್ರಿಯ ಶ್ರೀಕೃಷ್ಣ

ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಎಲ್ಲ ಚತುರ್ವೇದಗಳೂ ಸಮಾನ. ಎಲ್ಲವೂ ಅನಾದಿ, ಅನಂತ ಕಾಲದವರೆಗೆ ಉಳಿಯುವ ಗ್ರಂಥವಾಗಿದೆ. ಆದರೂ ಸಹ ಶ್ರೀಕೃಷ್ಣನಿಗೆ ಸಾಮವೇದವೇ ಇಷ್ಟವಾಗಿತ್ತು. ಅದಕ್ಕಾಗಿಯೇ ದಾಸರೂ ಸಹ ತಮ್ಮ ಸಾಹಿತ್ಯದಲ್ಲಿ ಸಾಮ ಗಾನ ಪ್ರಿಯ ಜೋ ಜೋ ಅಥವಾ ಸಾಮಗಾನ ವಿಲೋಲನ ಎಂದು ಹಾಡಿದ್ದಾರೆ. ಮಧ್ವಾಚಾರ್ಯರು ಉಪನಿಷತ್​ಗೆ ಅರ್ಥ ಬರೆಯುವಾಗ 'ಸಾ' ಮತ್ತು 'ಮ' ಶಬ್ದಕ್ಕೆ ಭಾರತೀ ಮತ್ತು ಭಾರತೀ ರಮಣ ಎಂಬ ಅರ್ಥ ನೀಡಿದ್ದಾರೆ. ಎಲ್ಲ ವೇದವೂ ತಿಳಿವಳಿಕೆ ನೀಡುವುದೇ ಆಗಿದ್ದರೂ ಭಾರತೀ ಮತ್ತು ಭಾರತೀಪತಿ (ಸಾಮ) ಹೇಳುವ ರೀತಿ ನನಗಿಷ್ಟವೆಂದು ಗೀತೆಯಲ್ಲೇ ಸ್ವಯಂ ಕೃಷ್ಣ ಹೇಳಿಕೊಂಡಿದ್ದಾನೆ ಎಂದರು.

ಪ್ರಶಸ್ತಿ ಪ್ರದಾನ, ದತ್ತಿ ಸಮರ್ಪಣೆ

ದಿ. ವಕೀಲ ಶ್ರೀಪತಿ ಆಚಾರ್ಯ ಅಲೆವೂರು ಅವರಿಗೆ ನೀಡಿದ ಕೃಷ್ಣ ಗೀತಾನುಗ್ರಹ ಮರಣೋತ್ತರ ಪ್ರಶಸ್ತಿಯನ್ನು ಪತ್ನಿ ಜಯಲಕ್ಷ್ಮೀ ಆಚಾರ್ಯ ಸ್ವೀಕರಿಸಿದರು. ಶ್ರೀಮಠದ ಪಾರಂಪರಿಕ ಶಿಷ್ಯರಾದ ಬ್ರಹ್ಮಾವರದ ಸಾಮಗ ಮಟ್ಪಾಡಿ ಮನೆತನದ ವೇ. ಸಾಮಗ ನರಸಿಂಹ ಆಚಾರ್ಯ ಸ್ಮರಣಾರ್ಥವಾಗಿ ಸಂಧ್ಯಾ ವಿದ್ಯಾಪೀಠಕ್ಕೆ ಕುಟುಂಬಸ್ಥರು ದತ್ತಿನಿಧಿ ಸಮರ್ಪಿಸಿದರು. ತುಮಕೂರಿನ ಗೋಪಾಲಕೃಷ್ಣ ಆಚಾರ್ಯ ದತ್ತಿನಿಧಿ ಕುರಿತು ವಿವರಿಸಿದರು.

ರಾಜಾಂಗಣದಲ್ಲಿ ನಿರಂತರ ಜ್ಞಾನಯಜ್ಞದಲ್ಲಿ ವಿಷ್ಣು ಪುರಾಣದಲ್ಲಿ ಗೀತಾ ಚಿಂತನೆ ಉಪನ್ಯಾಸದ ಮಂಗಳೋತ್ಸವ ನಡೆಯಿತು. ಪ್ರವಚನ ನೀಡಿದ ಶ್ರೀನಿವಾಸ ಭಟ್​ ಕುತ್ಪಾಡಿ ಅವರನ್ನು ಶ್ರೀಗಳು ಗೌರವಿಸಿದರು.

ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಮಠದ ದಿವಾನ ನಾಗರಾಜ ಆಚಾರ್ಯ, ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಸಾಂಸ್ಕ್ರತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​ ಉಪಸ್ಥಿತರಿದ್ದರು.

ಹಯಗ್ರೀವ ಸಾಮಗ ಸಾಮಗಾನ ನೆರವೇರಿಸಿದರು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿಯ ಶ್ರೀಕೃಷ್ಣ ಮಠವು ಅಷ್ಟಮಠಗಳಿಗೇ ಸೇರಿದ್ದೆಂದು ಬಹಳ ವರ್ಷಗಳ ಕಾಲ ಕೋರ್ಟ್​ನಲ್ಲಿ ವಾದ ನಡೆಸಿ ಗೆಲುವು ತಂದುಕೊಟ್ಟ ವಕೀಲ ದಿ.ಶ್ರೀಪತಿ ಆಚಾರ್ಯರು ಅಪ್ರತಿಮರು. ಉಡುಪಿಯ ಅಷ್ಟಮಠ ಹಾಗೂ ಕೃಷ್ಣ ಮಠ ಯಾವತ್ತೂ ಮರೆಯಲಾಗದ ಕಾರ್ಯ ಮಾಡಿದ್ದಾರೆ. ನಮ್ಮ 3ನೇ ಪರ್ಯಾಯದಲ್ಲಿ ಎದುರಾಗಿದ್ದ ತೊಡಕಿನ ಸಂದರ್ಭದಲ್ಲೂ ಸಹ ನಮ್ಮ ಪರವಾಗಿ ವಕಾಲತು ವಹಿಸಿ ನಮಗೆ ಪರ್ಯಾಯ ಪೂಜೆ ನಡೆಸಲು ಅವಕಾಶ ಮಾಡಿಕೊಟ್ಟ ದೊಡ್ಡ ಸಾಧಕರು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ