ಜಿಲ್ಲೆ

ಆತ್ಮಹತ್ಯೆ ತಡೆಗೆ ಜಾಗೃತಿ ಮೂಡಿಸುವುದು ಅಗತ್ಯ

ಧರ್ಮರಾಜ ರಾಮನಗೌಡ ಪಾಟೀಲ

ಬೆಳಗಾವಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡ ಸಹಿಸಲಾಗದೆ ಕೆಲವರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅಂಥ ಅವಸರದ ನಿರ್ಧಾರ ತಡೆಗಟ್ಟುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ಸಾಮಾಜಿಕ ಕಾರ್ಯಕರ್ತರಿಂದ ಆಗಬೇಕಿದೆ ಎಂದು ಜೆಎನ್‌ಎಂಸಿ ಮನೋವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಭೀಮಸೇನ ಟೆಕ್ಕಳಕಿ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಅಸ್ತಿತ್ವ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಹಳೇ ವಿದ್ಯಾರ್ಥಿಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಆತ್ಮಹತ್ಯೆ ನಿಯಂತ್ರಣ ದಿನ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಆತ್ಮಹತ್ಯೆ ತಡೆಗಟ್ಟುವಲ್ಲಿ ಸಮಾಜ ಕಾರ್ಯಕರ್ತರ ಪಾತ್ರ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದುಡುಕುವ ಮುನ್ನ ಅದರ ಪರಿಣಾಮಗಳ ಬಗ್ಗೆ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಜನರಲ್ಲಿ ಮಾನಸಿಕ ಆರೋಗ್ಯದ ಕುರಿತು ಆಪ್ತಸಮಾಲೋಚನೆ, ಜಾಗೃತಿ, ಚಿಕಿತ್ಸೆ, ಮನೋವೈದ್ಯಕೀಯ ಪ್ರಥಮ ಚಿಕಿತ್ಸೆಗಳಂತಹ ತಂತ್ರಗಳ ಮೂಲಕ ಆತ್ಮಹತ್ಯಾ ಪ್ರವೃತ್ತಿ ಕಡಿಮೆಗೊಳಿಸಬಹುದು ಎಂದು ತಿಳಿಸಿದರು.

ಕೆಎಲ್‌ಇ ಆಸ್ಪತ್ರೆಯ ಮನೋವೈದ್ಯಕೀಯ ಸಮಾಜ ಕಾರ್ಯಕರ್ತೆ ಶಿಲ್ಪಾ ದೊಡ್ಡಮನಿ, ಡಾ.ಸಂತೋಷ ಪಾಟೀಲ, ಡಾ. ಚಂದ್ರಶೇಖರ ಬನಸೋಡೆ, ಸಿದ್ಧಲಿಂಗೇಶ್ವರ ಬಿದರಳ್ಳಿ, ಕಿರಣ ಎಸ್., ದೇವೇಂದ್ರಪ್ಪ ಪೂಜೇರಿ, ಸಂಶೋಧನಾ ವಿದ್ಯಾರ್ಥಿಗಳು ಇತರರಿದ್ದರು.