ಹೊಸೂರು: ಪಾಲಕರ ವಿರೋಧಕ್ಕೆ ಹೆದರಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಕೃಷ್ಣಗಿರಿ ಜಿಲ್ಲೆ ಗೌತಳಂ ಗ್ರಾಮದಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಗೌತಳಂ ಗ್ರಾಮದ ನರಸಿಂಹಮೂರ್ತಿ (22) ಹಾಗೂ ಬಾಚಪ್ಪನಟ್ಟಿ ಗ್ರಾಮದ ಯುವಶ್ರೀ (17) ಮೃತರು.
ಮೃತ ದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ಕೆಳಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲಿನಿಂದ ಬಿಡುಗಡೆಯಾಗಿದ್ದ ಪ್ರಿಯಕರ: ಮರಗೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಹಾಗೂ ಕೃಷ್ಣಗಿರಿಯ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಯುವಶ್ರೀ ಪ್ರೀತಿಸುತ್ತಿದ್ದು, ಮದುವೆಯಾಗಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಯುವತಿ ಕಡೆಯವರು ಕಳೆದ ತಿಂಗಳು ಯುವತಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಡೆಂಕಣಿಕೋಟೆ ಮಹಿಳಾ ಠಾಣೆಯಲ್ಲಿ ನರಸಿಂಹಮೂರ್ತಿ ವಿರುದ್ಧ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ನರಸಿಂಹಮೂರ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. 10 ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದ ನರಸಿಂಹಮೂರ್ತಿ ಮೊಬೈಲ್ ಮೂಲಕ ಯುವಶ್ರೀ ಜತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ತೋಟದ ಮನೆಯಲ್ಲಿ ಇಬ್ಬರ ಭೇಟಿ: ಕೃಷ್ಣಗಿರಿಯಲ್ಲಿ ಓದುತ್ತಿದ್ದ ಯುವಶ್ರೀ ಶುಕ್ರವಾರ ಊರಿಗೆ ಬರುವುದಾಗಿ ಪಾಲಕರಿಗೆ ತಿಳಿಸಿದ್ದಳು. ಆದರೆ ನರಸಿಂಹ ಮೂರ್ತಿಯನ್ನು ಭೇಟಿಯಾಗಲು ಗೌತಾಳಂ ಗ್ರಾಮಕ್ಕೆ ತೆರಳಿದ್ದಳು. ನಂತರ ಇಬ್ಬರೂ ನರಸಿಂಹ ಮೂರ್ತಿ ಅವರ ಮನೆಯ ಸಮೀಪವಿರುವ ಅವರದ್ದೇ ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.
ಶನಿವಾರ ಬೆಳಕಿಗೆ: ಶನಿವಾರ ಬೆಳಗ್ಗೆ ನರಸಿಂಹಮೂರ್ತಿ ತಂದೆ ಮಾರೆಪ್ಪ ತೋಟದ ಮನೆಗೆ ತೆರಳಿದ್ದರು. ಒಳಗಡೆಯಿಂದ ಬೀಗ ಹಾಕಿದ್ದರಿಂದ ಗಾಬರಿಗೊಂಡು ಕಿಟಕಿ ಒಡೆದು ನೋಡಿದಾಗ ನರಸಿಂಹಮೂರ್ತಿ ಹಾಗೂ ಯುವಶ್ರೀ ಹಗ್ಗದಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ ಎನ್ನಲಾಗಿದೆ. ಈ ಕುರಿತು ಕೆಳಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡೆಂಕಣಿಕೋಟೆ ಡಿಎಸ್‌ಪಿ ಶಾಂತಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.