ಕೋಟ: ಐರೋಡಿ ಗ್ರಾಮಸಭೆ ಗ್ರಾಪಂ ಅಧ್ಯಕ್ಷೆ ಗೀತಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಧೂಳಂಗಡಿ ಶಾಲೆಯಲ್ಲಿ ಬುಧವಾರ ನಡೆಯಿತು. ಗ್ರಾಮಾಂತರ ಭಾಗದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ, ಕಸ ವಿಲೇವಾರಿ ಸಮಸ್ಯೆ, ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರರ ಕೊರತೆ ಮುಂತಾದ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಘವೇಂದ್ರ ರಾವ್ ಸಾಸ್ತಾನ ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಯುವ ಜನಾಂಗ ಆತ್ಮಹತ್ಯೆಗೆ ಬಲಿಯಾಗುತ್ತಿರುವುದು ಕಳವಳಕಾರಿ ಎಂದರು.
ಗ್ರಾಪಂ ವತಿಯಿಂದ ಮೂರು ಲಕ್ಷಕ್ಕೂ ಅಧಿಕ ಹಣವನ್ನು ಕಸ ವಿಲೇವಾರಿಗಾಗಿ ಮೀಸಲಿಡಲಾಗಿದೆ. ಆದರೆ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರಾದ ಆನಂದ ಗಾಣಿಗ, ಮೋಸಸ್ ರೋಡಿಗ್ರಸ್ ದೂರಿದರು. ಗ್ರಾಪಂನಲ್ಲಿ ಸ್ವಂತ ಎಸ್.ಎಲ್.ಆರ್.ಎಂ. ಘಟಕವಿಲ್ಲ, ಹೊರಗುತ್ತಿಗೆ ನೀಡಿ ಕಸ ನಿರ್ವಹಣೆ ಮಾಡಲಾಗುತ್ತಿದೆ. ಮುಂದೆ ಸ್ವಂತ ಘಟಕ ಸ್ಥಾಪಿಸಿ ಸಮಸ್ಯೆ ದೂರ ಮಾಡುತ್ತೇವೆ ಎಂದು ಅಧ್ಯಕ್ಷರು ಭರವಸೆ ನೀಡಿದರು.
ವೈದ್ಯರ ಬದಲಾವಣೆಗೆ ಮನವಿ: ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಬದಲಿಸುವಂತೆ ಕಳೆದ ಗ್ರಾಮಸಭೆಯಲ್ಲೇ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಈ ಕುರಿತು ಕ್ರಮಕೈಗೊಂಡಿಲ್ಲ. ಆಯುಷ್ಮಾನ್ ಭಾರತ್ ಯೋಜನೆ ಪ್ರಯೋಜನ ಪಡೆಯಲು ಕಡ್ಡಾಯವಾಗಿ ಜಿಲ್ಲಾಸ್ಪತ್ರೆಯ ವೈದ್ಯರ ಶಿಫಾರಸ್ಸು ಪತ್ರ ಪಡೆಯಬೇಕು ಎಂಬ ನಿಯಮದಿಂದಾಗಿ ತುರ್ತು ಸಂದರ್ಭದಲ್ಲಿ ಪ್ರಾಣ ಹಾನಿಯಾಗುತ್ತದೆ ವಿಟ್ಠಲ್ ಪೂಜಾರಿ ಐರೋಡಿ ತಿಳಿಸಿದರು. ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ವೈದ್ಯಾಧಿಕಾರಿ ಭರವಸೆ ನೀಡಿದರು.
ಗ್ರಾಪಂ ವಾರ್ಷಿಕ ಲೆಕ್ಕಪತ್ರವನ್ನು ಲೆಕ್ಕಪರಿಶೋಧಕರು ಪರಿಶೀಲಿಸಬೇಕು ಎಂದು ರಾಘವೇಂದ್ರ ಐರೋಡಿ ಸಲಹೆ ನೀಡಿದರು. ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ಸಿಬಂದಿಗಳ ಸಂಖ್ಯೆ ಕಡಿಮೆ ಇರುವುದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಸಮಸ್ಯೆಯಾಗುತ್ತಿದೆ ಎಂದು ಡೆನ್ನಿಸ್ ಡಿಸೋಜ ಹೇಳಿದರು. ಉಪಾಧ್ಯಕ್ಷ ನಟರಾಜ್ ಗಾಣಿಗ ಹಾಗೂ ಸದಸ್ಯರು ಉಪಸ್ಥಿತರಿದ್ದರು.ಪಶು ವೈದ್ಯ ಇಲಾಖೆಯ ಮಂಜುನಾಥ ಅಡಿಗ ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಿಡಿಒ ರಾಜೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.