ಹುಬ್ಬಳ್ಳಿ: ಮೀಟರ್ ಬಡ್ಡಿದಂಧೆಕೋರರ ಕಿರುಕುಳಕ್ಕೆ ಬೇಸತ್ತ ಕುಂದಗೋಳ ಮಾರ್ಕೆಟ್ ರಸ್ತೆಯ ಯುವಕರೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಇಲ್ಲಿಯ ಕೆಎಂಸಿ ಆರ್‌ಐನಲ್ಲಿ ಶನಿವಾರ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸುನಿಲ್ ಹೇಮಣ್ಣ ಪಾತ್ರೋಟಿ (26) ಆತ್ಮಹತ್ಯೆಗೆ ಯತ್ನಿಸಿದವರು. ಬರೀ ಮೂವತ್ತು ಸಾವಿರ ರೂ.ಗೆ ಒಂದೂವರೆ ಲಕ್ಷ ರೂ.ಗೂ ಅಧಿಕ ಹಣವನ್ನು ವಸೂಲಿ ಮಾಡಿದ್ದರು. ಅಲ್ಲದೇ ಮನೆಯ ಮುಂದಿದ್ದ ಕಾರ್ ಕೂಡ ತೆಗೆದುಕೊಂಡು ಹೋಗಿದ್ದಾರೆ. ಬಾಯಿಗೆ ಬಂದಂತೆ ಅವಚ್ಛವಾಗಿ ನಿಂದಿಸುತ್ತಿದ್ದರು ಎಂಬುದು ಕುಟುಂಬದವರ ಆರೋಪ.
ಸಂತೋಷ ಮುಳ್ಳೋಳಿ(29), ಶಿವು ಮುಳ್ಳೋಳಿ(26), ಪ್ರವೀಣ ಮುದ್ದಣ್ಣವರ (25), ಪ್ರಕಾಶ ನಿಂಗಪ್ಪ ಮುಳ್ಳೋಳಿ(25) ಸೇರಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬೆಸತ್ತ ಸುನಿಲ್ ಮಾರ್ಕೆಟ್‌ನಲ್ಲಿ ವಿಷ ತಂದು ಕುಡಿದಿದ್ದರು. ಮನೆಯವರೆಲ್ಲ ಸೇರಿ ಇಲ್ಲಿಯ ಕೆಎಂಸಿಆರ್‌ಐಗೆ ತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಈ ಕುರಿತು ಕುಂದಗೋಳ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ, ಯಾರೂ ಕ್ಯಾರೆ ಎನ್ನುತ್ತಿಲ್ಲ ಎಂದು ದೇವಕ್ಕ ಎನ್ನುವವರು ಸುದ್ದಿಗಾರರಿಗೆ ವಿವರಿಸಿದ್ದಾರೆ.