ಜಿಲ್ಲೆ

ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ -ಶಿಕ್ಷಕರ ಕಿರುಕುಳದಿಂದ ಮನನೊಂದು ಕೃತ್ಯ ಆರೋಪ

Mangaluru - Nishantha Narayana

ಪುತ್ತೂರು: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ, ತಣ್ಣೀರುಪಂಥ ಕಲ್ಲೇರಿ ಮೂಲದ ಸದ್ಯ ಪಡೀಲು ನಿವಾಸಿ ಪಾತಿಮತ್ ಶೈಮಾ(೧೫) ಗುಳಿಗೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಶಾಲೆಯಲ್ಲಿ ಶಿಕ್ಷಕರ ಕಿರುಕುಳಕ್ಕೆ ಮನನೊಂದು ಕೃತ್ಯ ಎಸಗಿದ್ದಾಳೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.

ಕರಾಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ ೧೦ನೇ ತರಗತಿಗೆ ಪುತ್ತೂರಿಗೆ ಸೇರ್ಪಡೆಗೊಂಡಿದ್ದಳು. ಶಾಲೆ ಶೇ.೧೦೦ ಫಲಿತಾಂಶ ಪಡೆಯುತ್ತಿದ್ದು, ನಿಮ್ಮ ಮಗಳು ಸರಿಯಾಗಿ ಕಲಿಯುತ್ತಿಲ್ಲ ಎಂದು ಶಿಕ್ಷಕರು ಹೆತ್ತವರಿಗೆ ಕರೆ ಮಾಡಿ ಹೇಳುತ್ತಿದ್ದರು. ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಮಾನಸಿಕ ಹಿಂಸೆ ನೀಡುತ್ತಿದ್ದರಿಂದ ನೊಂದಿರುವ ಬಗ್ಗೆ ವಿದ್ಯಾರ್ಥಿನಿಯ ತಂದೆ ಆಶ್ರಫ್ ಕಲ್ಲೇರಿ ಕ್ಷೇತ್ರ ಶಿಕ್ಷಣಾಽಕಾರಿಗೆ ದೂರು ನೀಡಿದ್ದರು. ವಿದ್ಯಾರ್ಥಿನಿ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದು, ಇದೇ ಕಾರಣಕ್ಕೆ ತರಗತಿಯಲ್ಲಿ ಅವಮಾನ ಆಗುವ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸೋಮವಾರ ಶಾಲೆಗೆ ಹೊರಡುವ ವೇಳೆ ವಿದ್ಯಾರ್ಥಿನಿ ನೋವಿನ ಗುಳಿಗೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಾಂತಿ ಮಾಡುತ್ತಿರುವುದನ್ನು ಗಮನಿಸಿ ಪಾಲಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಆಸ್ಪತ್ರೆಗೆ ಆಗಮಿಸಿ ಘಟನೆ ಬಗ್ಗೆ ಹೇಳಿಕೆ ಪಡೆದುಕೊಂಡಿದ್ದಾರೆ.