ಪೊಲೀಸ್​ ಠಾಣೆ ಮುಂದೆ ಜಮಾಯಿಸಿದ್ದ ಮೃತ ಪ್ರವಿಣ್​ ಗೌಡ ಕುಟುಂಬಸ್ಥರು ಮತ್ತು ಬೆಂಬಲಿಗರು. 
ಜಿಲ್ಲೆ

ಫೇಸ್​ಬುಕ್​ನಲ್ಲಿ ವಿಡಿಯೋ ಹರಿಬಿಟ್ಟು ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : "ಕೊಟ್ಟ ಸಾಲದ ಹಣವನ್ನು ವಾಪಸ್​ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ, ಅವರು ನೀಡಿದ ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದ ಸಾವಿಗೆ ಶರಣಾಗುತ್ತಿದ್ದೇನೆ' ಎಂದು ಫೇಸ್​ಬುಕ್​ನಲ್ಲಿ ವಿಡಿಯೋ ಸಂದೇಶ ರವಾನಿಸಿ ಬಿಜೆಪಿ ಕಾರ್ಯಕರ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆನೇಕಲ್​ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪಟ್ಟಣದ ಪ್ರವಿಣ್​ ಗೌಡ(35) ಆತ್ಮಹತ್ಯೆಗೆ ಶರಣಾದವರು. ಪ್ರಕರಣ ಸಂಬಂಧ ಸಮಂದೂರಿನ ಕಿರಣ್​ ಗೌಡ, ಆನೇಕಲ್​ನ ಶ್ರೀನಿವಾಸ್​ಬಾಬು, ಹರೀಶ್​, ಭಾಸ್ಕರ್​, ನಾರಾಯಣಪ್ಪ, ದೊಡ್ಡಹಗಡೆ ಮಧುಗೌಡ, ಭಾಗ್ಯಾ, ಮುನಿರಾಜು ಗೌಡ ಹಾಗೂ ಸರವಣ ಎಂಬುವವರ ವಿರುದ್ಧ ದೂರು ದಾಖಲಾಗಿದೆ.

ಸ್ನೇಹಿತೆಗೆ ಸಾಲ ಕೊಟ್ಟಿದ್ದ!: ವಿಡಿಯೋದಲ್ಲಿ ಉಲ್ಲೇಖಿಸಿರುವ ಸ್ನೇಹಿತೆ ಶ್ವೇತಾ ಹಾಗೂ ಆನೇಕಲ್​ ಪಟ್ಟಣ ಪುರಸಭೆ ಸದಸ್ಯೆ ಭಾಗ್ಯಲ್ಮ, ಆಕೆ ಪತಿ ಶ್ರೀನಿವಾಸ್​ಬಾಬು ಸೇರಿ ಹಲವರ ಹೆಸರನ್ನು ಹೇಳಿರುವ ಪ್ರವಿಣ್​ಗೌಡ, ಸಾಲದ ಹಣ ವಾಪಸ್​ ಕೇಳಿದ್ದಕ್ಕೆ ಸಾಕಷ್ಟು ಕಿರುಕುಳ ನೀಡಿದರು, ಸಾಲದ ಹಣ ವಾಪಸ್​ ಕೊಡಿಸುವಂತೆ ಆನೇಕಲ್​ ಮಂಡಲ ಅಧ್ಯ ಮುನಿರಾಜುಗೌಡನ ಬಳಿ ಸಹಾಯ ಕೋರಿದಾಗ ಮುನಿರಾಜುಗೌಡ ಮಾತುಕತೆಗೆ ಮನೆಗೆ ಕರೆಸಿಕೊಂಡಿದ್ದ, ಅದಾದ ಬಳಿಕ ವಿಲ್ಲಾವೊಂದರಲ್ಲಿ ಮಾತುಕತೆ ನಡೆಸುವ ವೇಳೆ ಪುರಸಭೆ ಸದಸ್ಯೆ ಭಾಗ್ಯಲ್ಮ ಅವರ ಪತಿ ಶ್ರೀನಿವಾಸ್​ಬಾಬು 20ಕ್ಕೂ ಹೆಚ್ಚು ಗೂಂಡಾಗಳೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿದರು, ಒತ್ತಾಯ ಪೂರ್ವಕವಾಗಿ ನನ್ನ ಬಳಿ ಹೇಳಿಕೆಯೊಂದನ್ನು ವಿಡಿಯೋ ಮಾಡಿಕೊಂಡರು ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ. ಕಿರಣ್​ ಗೌಡ ಹೆಸರನ್ನು ವಿಡಿಯೋದಲ್ಲಿ ಪದೇಪದೆ ಉಲ್ಲೇಖಿಸಿರುವ ಪ್ರವಿಣ್​ ಗೌಡ, ಕಿರಣ್​ ಗೌಡ 30ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಅದೆಲ್ಲವನ್ನೂ ನನ್ನ ಮೇಲೆ ಹಾಕಿದ್ದಾನೆ. ಹಾಗಾಗಿ ಆತನ ವಿರುದ್ಧ ಕ್ರಮ ಜರುಗಿಸಬೇಕು ಎಂದೂ ವಿಡಿಯೋದಲ್ಲಿ ಒತ್ತಾಯಿಸಿದ್ದಾನೆ.

ನ್ಯಾಯಕ್ಕಾಗಿ ಒತ್ತಾಯ : ಪ್ರಕರಣದ ಹಿನ್ನೆಲೆಯಲ್ಲಿ ಆನೇಕಲ್​ ಠಾಣೆ ಮುಂದೆ ನೂರಾರು ಮಂದಿ ಜಮಾಯಿಸಿದ್ದರು. ಸಾವಿಗೆ ನ್ಯಾಯಕೊಡಿಸಬೇಕು. ಅಪರಾಧಿಗಳನ್ನು ಬಂಧಿಸಬೇಕು ಎಂದು ಕುಟುಂಬದವರು ಒತ್ತಾಯಿಸಿದರು. ಪ್ರಾಮಾಣಿಕ ತನಿಖೆ ನಡೆಸುವುದಾಗಿ ಪೊಲೀಸರು ಜನರನ್ನು ಸಮಾಧಾನಗೊಳಿಸಿದರು.

ವಿದ್ಯಾವಂತನಾಗಿದ್ದ ನನ್ನ ಅಣ್ಣ ಕೃಷಿಕನಾಗಿ ಚೆನ್ನಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಾಗಿರಲಿಲ್ಲ. ಆತನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಸಾವಿಗೆ ಕಾರಣವಾಗಿದ್ದಾರೆ. ಅಂಥವರ ವಿರುದ್ಧ ಕಾನೂನು ಕ್ರಮಜರುಗಿಸಬೇಕು. | ಸೌಮ್ಯಾ ಮೃತ ಪ್ರವಿಣ್​ಗೌಡ ಸಹೋದರಿ ತನ್ನ ಮೇಲಾದ ದಬ್ಬಾಳಿಕೆ, ದೌರ್ಜನ್ಯದ ಬಗ್ಗೆ ನನ್ನ ಮಗ ವಿಡಿಯೋ ಮಾಡಿ ೇಸ್​ಬುಕ್​ನಲ್ಲಿ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅವನು ಸ್ನೇಹಿತರಿಗೆ ಹಣ ಕೊಟ್ಟಿದ್ದ ಬಗ್ಗೆ ಮನೆಯಲ್ಲಿಯೂ ಹೇಳಿದ್ದ. ಹಣವನ್ನು ವಾಪಸ್​ ಕೇಳಿದಾಗ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ, ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಬೇಕು. | ಸರಸ್ವತಿ ಶಿ ಮೃತನ ತಾಯಿ