ಜಿಲ್ಲೆ

ಸಾಲ ಬಾಧೆಗೆ ಕೃಷಿಕ ಆತ್ಮಹತ್ಯೆ

ಎ. ಆರ್. ರಘುರಾಮ

ಹೊಳೆನರಸೀಪುರ : ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಮೆಣಗನಹಳ್ಳಿ ಗ್ರಾಮದ ಕೃಷಿಕ ಧರ್ಮರಾಜ್ (44) ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧರ್ಮರಾಜ್ ಅವರು ದೊಡ್ಡಕಾಡನೂರು ಕರ್ನಾಟಕ ಗ್ರಾಮೀಣ ಬ್ಯಾಂಕಿನ ಶಾಖೆಯಲ್ಲಿ ಸಾಲ, ಎಲ್‌ಎನ್‌ಟಿ ಫೈನಾನ್ಸ್ ಕಂಪನಿಯಲ್ಲಿ ಟ್ರ್ಯಾಕ್ಟರ್ ಸಾಲ, ಒಡವೆ ಸಾಲ ಹಾಗೂ ಪತ್ನಿಯ ಹೆಸರಿನಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದಿಟದ ಸಾಲ ಪಡೆದಿದ್ದರು. ಮಳೆ ಇಲ್ಲದೇ ಬೆಳೆ ಒಣಗಿದ ಕಾರಣದಿಂದ ಅವರ ತೋಟದ ಪಕ್ಕದ ಜಮೀನಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.