ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀ ಖಂಡನೆ
ಶ್ರೀಕ್ಷೇತ್ರ ಧರ್ಮಸ್ಥಳವು ಪುರಾಣೇತಿಹಾಸದ ಶ್ರದ್ಧಾ ಕೇಂದ್ರವಾಗಿದ್ದು, ಅದರ ವಿರುದ್ಧ ಹೋರಾಟದ ಹೆಸರಿನಲ್ಲಿ ಕ್ಷೇತ್ರದ ಪಾವಿತ್ರ್ಯ ಮತ್ತು ಅಲ್ಲಿನ ಧರ್ಮಾಧಿಕಾರಿಗಳ ಗೌರವಕ್ಕೆ ಧಕ್ಕೆ ತರುವ ಹುನ್ನಾರ ನಡೆದಿದೆ. ಅದು ಸಲ್ಲದು ಎಂದು ಉಡುಪಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಖಂಡಿಸಿದ್ದಾರೆ.
ತನಿಖಾ ಹಂತದಲ್ಲಿಯೇ ನಡೆಯುತ್ತಿರುವ ವ್ಯಾಪಕ ಗೊಂದಲ ಗಮನಿಸಿದರೆ ಅದು ಪೂರ್ವ ನಿಯೋಜಿತ ಎಂಬ ಗುಮಾನಿಗೆ ಕಾರಣವಾಗುತ್ತಿದೆ. ಹೀಗಾಗಿ ನಾಗರಿಕರು ಜವಾಬ್ದಾರಿಯಿಂದ ವರ್ತಿಸಬೇಕು. ಅಲ್ಲದೆ, ಅನಾವಶ್ಯಕ ವದಂತಿಗಳಿಗೆ ಕಿವಿಗೊಡುವುದು ಸಮಂಜಸವೂ ಅಲ್ಲ, ಶಿಷ್ಟಾಚಾರವೂ ಅಲ್ಲ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.