ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ವರ್ಷ ಪರ್ಯಂತದ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ
ಅಧ್ಯಾತ್ಮ ಕ್ಷೇತ್ರದ ಮೇಲೆ ಪಾಶ್ಚಿಮಾತ್ಯ ಗಾಳಿ ವಿಪರೀತವಾಗಿ ಬೀಸಿ ಆಧ್ಯಾತ್ಮಿಕ ವಿಚಾರಗಳೆಲ್ಲ ಹಾರಿ ಹೋಗುತ್ತಿರುವ ಸಂದರ್ಭದಲ್ಲಿ ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಅಧ್ಯಾತ್ಮ ಕ್ಷೇತ್ರಕ್ಕೆ ರಕ್ಷಣೆ ಕೊಟ್ಟು ಆಧ್ಯಾತ್ಮಿಕ ಶಕ್ತಿ ಉಳಿಸಿದ ಹೆಗ್ಗಳಿಕೆ, ಜನರನ್ನು ಅಧ್ಯಾತ್ಮದತ್ತ ಆಕರ್ಷಿಸಿದ ಕೀರ್ತಿ ಬನ್ನಂಜೆ ಗೋವಿಂದಾಚಾರ್ಯರಿಗೆ ಸಲ್ಲುತ್ತದೆ. ಈ ಹಿಂದೆ ತಂತ್ರಜ್ಞಾನ ಇಲ್ಲದ್ದರಿಂದ ಎಷ್ಟೋ ಆಧ್ಯಾತ್ಮಿಕ ವಿಚಾರ ಧಾರೆ ಅಲಭ್ಯ. ಆದರೆ, ಬನ್ನಂಜೆಯವರ ಎಲ್ಲ ಪ್ರವಚನ, ಆಧ್ಯಾತ್ಮಿಕ ವಿಚಾರಧಾರೆ ಮರಣದ ನಂತರವೂ ಲಭ್ಯವಿದ್ದು ಅವರು ಅಜರಾಮರ ಆಗಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಆಗಸ್ಟ್ 2ರಂದು ಸಂಜೆ ಆಯೋಜಿಸಿದ್ದ ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅವರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಷ ಪರ್ಯಂತ ನಡೆಯಲಿರುವ ಬನ್ನಂಜೆ-90 ನಮನ' ಕಾರ್ಯಕ್ರಮಕ್ಕೆ ಆಯೋಜಕರಿಗೆ ಕೃಷ್ಣನ ಕಡಗೋಲು ಹಾಗೂ ಕಲಶದಲ್ಲಿ ಮಧ್ವ ಸರೋವರದ ತೀರ್ಥ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ ಆಶೀರ್ವದಿಸಿದರು.
ಕಲಿಯುಗದ ಭೀಷ್ಮ
ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಂಟಿದ್ದ ಕಾಯಿಲೆ, ಗೊಂದಲ ನಿವಾರಣೆ ಮಾಡಿದವರಿದ್ದರೆ ಅದು ಗೋವಿಂದಾಚಾರ್ಯರು ಮಾತ್ರ. ಗೋವಿಂದ ಎಂಬ ಭಗವಂತನ ಹೆಸರನ್ನು ಪಡಮನ್ನೂರು ನಾರಾಯಣಚಾರ್ಯರು ತನ್ನ ಮಗನಿಗೆ ಇಟ್ಟರು. ಆದರೆ, ಆ ಗೋವಿಂದ ಎಂಬ ಹೆಸರು ಅವರ ಪ್ರವಚನಗಳ ಮೂಲಕ ಬಿರುದಾಯಿತು. ಬನ್ನಂಜೆಯವರ ಬಾಯಿಂದ ಹೊರಟ ಎಲ್ಲ ಮಾತು, ಶಬ್ದಗಳು ಭಗವಂತನ ಗುಣ-ವಿಶೇಷವನ್ನೇ ಪ್ರತ್ಯಕ್ಷೀಕರಿಸಿದೆ. ಹೀಗಾಗಿ ಅವರನ್ನು ಕಲಿಯುಗದ ಭೀಷ್ಮ ಎಂದು ಘೋಷಿಸಬಹುದು ಎಂದರು.
ನಾವುಗಳೇ ಧನ್ಯರು
ಸಾಹಿತಿ, ಆಂಗ್ಲ ಭಾಷಾಂತರಗಾರ್ತಿ ಡಾ. ಉಷಾ ಚಡಗ ಮಾತನಾಡಿ, ಬನ್ನಂಜೆಯವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಬೋಧನೆ ಸದಾ ನಮ್ಮೊಂದಿಗಿದೆ. ಅವರು ಬಾಳಿ ಬದುಕಿದ ಕಾಲದಲ್ಲಿ ಮಾರ್ಗದರ್ಶನ, ಪ್ರವಚನ ಕೇಳಿದ ನಾವುಗಳೇ ಧನ್ಯರು. ಅವರ ಕಾರುಣ್ಯದಿಂದಲೇ ನಾನು ಪ್ರಥಮ ವಿದ್ವತ್ ಮಹಿಳೆಯಾಗಲು, ಮಧ್ವ ತತ್ತಶಾಸ್ತ್ರದಲ್ಲಿ ಪಿಎಚ್.ಡಿ ಮಾಡಲು ಸಾಧ್ಯವಾಯಿತು ಎಂದರು.
ಧ್ವನಿ ಮುದ್ರಿಕೆ, ಕೈಪಿಡಿ ಬಿಡುಗಡೆ
ಬನ್ನಂಜೆ ಗೋವಿಂದಾಚಾರ್ಯರು ಅಮೆರಿಕದಲ್ಲಿ ಪಾಶ್ಚಿಮಾತ್ಯ ತತ್ವಜ್ಞಾನಿ ಎಡ್ವಿನ್ ಜೆರೋ ಅವರಿಗೆ ಮಧ್ವಾಚಾರ್ಯರ ಅಹಂ ಬ್ರಹ್ಮಾಸ್ಮಿ ಎಂಬ ತತ್ವ ಶಾಸ್ತ್ರದ ಕುರಿತು ಪಾಠ ಮಾಡಿದ ಧ್ವನಿಮುದ್ರಿಕೆ ಬಿಡುಗಡೆ ಮಾಡಲಾಯಿತು. ಉಷಾಹರಣ ಕಾವ್ಯ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬನ್ನಂಜೆ ಕೈಪಿಡಿ ಬಿಡುಗಡೆ ಮಾಡಲಾಯಿತು. ಪುತ್ತಿಗೆ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನಾದ ಅಧ್ಯಕ್ಷ ಮಲ್ಲೇಪುರಂ ಡಾ. ಜಿ.ವೆಂಕಟೇಶ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ವರ್ಷ ಆ.1ರಿಂದ 3ರ ವರೆಗೆ ಬೆಂಗಳೂರಿನಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು.
ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್ ಇತರರಿದ್ದರು.
ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿ ಪ್ರಾರ್ಥಿಸಿದರು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ವೀಣಾ ಬನ್ನಂಜೆ ವಂದಿಸಿದರು.
'ನನ್ನ ಪಿತಾಮಹ' ನಾಟಕ ಪ್ರದರ್ಶನ
ಡಾ. ವೀಣಾ ಬನ್ನಂಜೆ ತನ್ನ ಅಜ್ಜನ ಕುರಿತು ಬರೆದ 'ನನ್ನ ಪಿತಾಮಹ' (ಅಜ್ಜನ ಜೀವನ ಚರಿತ್ರೆ) ಎಂಬ ನಾಟಕವನ್ನು ಖ್ಯಾತ ನಟ ಸುಚೇಂದ್ರಪ್ರಸಾದ್ ಅಭಿನಯ, ನಿರ್ದೇಶನದಲ್ಲಿ ತಂಡದ ಕಲಾವಿದರು ಅಭಿನಯಿಸಿದರು. ಶ್ರೀಪಾದ ತ್ರಯರು ನಾಟಕ ವೀಕ್ಷಿಸಿದರು.
ತತ್ವಶಾಸ್ತ್ರಗಳ ಬೋಧನೆ ಹಾಗೂ ಪ್ರಸಾರಕ್ಕೆ ಯಾವುದೇ ಸೀಮೆ ಇರಬಾರದು. ಅದು ಸೀಮಾತೀತ ಆಗಿರಬೇಕೆಂಬ ಬನ್ನಂಜೆ ಗೋವಿಂದಾಚಾರ್ಯರ ನಿಲುವೇ ನಮ್ಮ ವಿದೇಶ ಪ್ರವಾಸಕ್ಕೆ ಸ್ಫೂರ್ತಿ. ವಿದೇಶಕ್ಕೆ ಮೋಜಿಗಾಗಿ ನಾವು ಹೋಗಿದ್ದಲ್ಲ. ಅಲ್ಲಿನ ನೆಲದಲ್ಲೂ ಮಧ್ವತತ್ವ ಪ್ರಸಾರ ಮಾಡಲೆಂದೇ ಹೋಗಿದ್ದು. ಕೃಷ್ಣ ಕೇವಲ ಉಡುಪಿಗೆ ಸೀಮಿತನಲ್ಲ. ಆತ ವಿಶ್ವ ನಾಯಕ.
| ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ