ಜಿಲ್ಲೆ

ನಗರದೆಲ್ಲೆಡೆ ಸುಗ್ಗಿಯ ರಂಗು, ಢುಮುಕು ಢುಮುಕು ಸದ್ದು ಮಾಡುತ್ತಿದ್ದೆ ಗುಮಟೆ ಪಾಂಗು

Uttara Kannada - Subash Hegde

ಕಾರವಾರ: ಮಾರ್ಚ್ 25 ರಂದು ನಡೆಯುವ ಹೋಳಿ ಬಣ್ಣದೋಕುಳಿಗೂ ಮುಂಚೆಯೇ ಕಾರವಾರ ಶಹರ ರಂಗೇರಿದೆ. ನಗರದಲ್ಲಿ ಬಣ್ಣದ ತುರಾಯಿಗಳ ಸಂಚಾರ ಗಮನ ಸೆಳೆಯುತ್ತಿದೆ. ಗುಮಟೆ ಪಾಂಗಿನ ಢುಮುಕು, ಢುಮುಕು ಶಬ್ದ ಕಿವಿಗೆಗೆ ಅಪ್ಪಳಿಸುತ್ತಿದೆ. ಲಟಕ, ಪಟಕ ಕೋಲಾಟದ ಸದ್ದಿಗೆ ನವಿಲು ಗರಿ ಹಿಡಿದು ನೃತ್ಯ ಮಾಡುವ "ಹೊಹೊ ಚೋಚ್‌" ಜಾನಪದ ಹಾಡಿನ ನೃತ್ಯ ಸಂತಸ ನೀಡುತ್ತಿದೆ.
ರಂಗು, ರಂಗಿನ ಬೆಂಡಿನ ತುರಾಯಿ, ಬಣ್ಣದ ನಿಲುವಂಗಿ ತೊಟ್ಟ ವಿವಿಧ ಸಮುದಾಯಗಳ ಪಾರಂಪರಿಕ ಸುಗ್ಗಿ ತಂಡಗಳು ನಗರದ ವಿವಿಧೆಡೆ ಸಂಚಾರ ನಡೆಸಿವೆ. ಹಾಲಕ್ಕಿ ಒಕ್ಕಲಿಗ, ಮೀನುಗಾರ, ಕೋಮಾರಪಂತ, ಗುನಗಿ ಮುಂತಾದ ಸಮುದಾಯಗಳು ಸುಗ್ಗಿ ಸಂಚಾರ ನಡೆಸುವ ರೂಢಿ ಇದೆ. ಕೆಲ ಸಮುದಾಯಗಳು ಪ್ರತಿ ವರ್ಷ ಸುಗ್ಗಿ ಸಂಚಾರ ಮಾಡುವುದಿಲ್ಲ. ಮುಖ್ಯವಾಗಿ ಹಾಲಕ್ಕಿ ಒಕ್ಕಲಿಗರ ಹಲವು ಗ್ರಾಮಗಳಿಂದ ಪ್ರತಿ ಬಾರಿ ಸುಗ್ಗಿ ತಂಡಗಳು ಎಲ್ಲೆಡೆ ಗುಮಟೆ ಪಾಂಗ್ ಸದ್ದಿಗೆ ಕೋಲಾಟ ನಡೆಸುತ್ತವೆ.
ಹೋಳಿ ಹುಣ್ಣಿಮೆಗೂ ವಾರ ಮುಂಚೆ ಊರ ದೇವರಿಗೆ ಪೂಜೆ ಸಲ್ಲಿಸಿ, ಗೌಡರ ಅಥವಾ ಮುಖ್ಯಸ್ಥರ ಮನೆಯಿಂದ ಸುಗ್ಗಿ ಸಂಚಾರ ಪ್ರಾರಂಬವಾಗುತ್ತದೆ. ತಂಡದಲ್ಲಿ 25 ರಿಂದ 30 ಜನರಿರುತ್ತಾರೆ. ಸುಗ್ಗಿ ತುರಾಯಿ ಕಟ್ಟುವವರು ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಸಾರಾಯಿ ಕುಡಿಯುವುದಿಲ್ಲ. ಸುಗ್ಗಿ ಕಾಲದಲ್ಲಿ ಮನೆಯಿಂದ ಹೊರಗೇ ಇದ್ದು, ತಮ್ಮ ಸಮುದಾಯದವರು ಮನೆಗಳ ಎದುರಿಗೆ ಮಾತ್ರ ಸುಗ್ಗಿ ಕುಣಿತ ಮಾಡುತ್ತಾರೆ. ಕೆಲ ತಂಡಗಳು 40 ರಿಂದ 50 ಕಿಮೀ ದೂರ ಸಂಚರಿಸುವುದೂ ಇದೆ. ಹೋಳಿ ಹುಣ್ಣಿಮೆಯ ದಿನ ಕರಿ ದೇವರಿಗೆ ಪೂಜೆ ಸಲ್ಲಿಸಿ ತುರಾಯಿ ಬಿಚ್ಚಿ ಸುಗ್ಗಿ ಸಮಾಪ್ತಿ ಮಾಡಲಾಗುತ್ತದೆ. ಸುಗ್ಗಿ ತಂಡದ ಸದಸ್ಯರು ಸ್ವತಃ. 10 ರಿಂದ 15 ಸಾವಿರ ಖರ್ಚು ಮಾಡಿ, ವಿಧ, ವಿಧವಾದ ತುರಾಯಿ ತಯಾರಿಸಿಕೊಳ್ಳುವುದು ವಿಶೇಷ. ಅಂಕೋಲಾದ ಬೆಳಂಬಾರದ ಹಾಲಕ್ಕಿ ಒಕ್ಕಲಿಗರ ಸುಗ್ಗಿ ತಂಡ ಪ್ರತಿ ಬಾರಿ ಸಂಚಾರ ನಡೆಸುತ್ತದೆ. ಅಂಕೋಲಾ ತಹಸೀಲ್ದಾರ್‌ ಕಚೇರಿಯ ಎದುರಿಗೂ ಸುಗ್ಗಿ ಕುಣಿತ ನಡೆಸುವ ರೂಢಿ ಇದೆ ಎನ್ನುತ್ತಾರೆ ರಾಮ ಗೌಡ.
ಸುಗ್ಗಿ ಪ್ರದರ್ಶನ ನೋಡಿದ ಪ್ರತಿ ಮನೆಯ ಯಜಮಾನರು ತಂಡವನ್ನು ದೇವರ ಸ್ವರೂಪ ಎಂದು ಭಾವಿಸಿ ಆಶೀರ್ವಾದ ಪಡೆಯುತ್ತಾರೆ. ತಂಡಕ್ಕೆ ಅಕ್ಕಿ, ಕಾಯಿ ಜತೆ ವೀಳ್ಯದೆಲೆಯಲ್ಲಿ ಹಣ ನೀಡಿ ಗೌರವಿಸುತ್ತಾರೆ. ಇದರಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ. ಮಳೆ, ಬೆಳೆ ಉತ್ತಮ ಇರುತ್ತದೆ. ರೋಗ, ರುಜಿನಗಳು ಬಾರದೇ ಕುಟುಂಬಗಳು ಸಂಪದ್ಭರಿತವಾಗಿರುತ್ತವೆ ಎಂಬ ನಂಬಿಕೆ ಈ ಭಾಗದಲ್ಲಿದೆ. ಕೆಲವು ಸುಗ್ಗಿ ತಂಡಗಳು ಕಾರವಾರ, ಅಂಕೋಲಾ ತಹಸೀಲ್ದಾರ್ ಕಚೇರಿಗಳ ಎದುರೂ ಪ್ರದರ್ಶನ ನೀಡುತ್ತವೆ.