ಭರತ್ ಶೆಟ್ಟಿಗಾರ್ ಮಂಗಳೂರು
ಕರಾವಳಿಯಲ್ಲಿ ಭತ್ತ ಎರಡನೇ ಬೆಳೆ/ಸುಗ್ಗಿ (ರಬ್ಬಿ)ಯ ಕಟಾವು ಕಾರ್ಯ ಈಗಾಗಲೇ ಆರಂಭವಾಗಿದ್ದು, ಮುಂದಿನ ಹದಿನೈದು ದಿನದಲ್ಲಿ ಸಂಪೂರ್ಣವಾಗುವ ಸಾಧ್ಯತೆಯಿದೆ.
ಉಭಯ ಜಿಲ್ಲೆಗಳಲ್ಲಿ ಹಿಂಗಾರು ಅವಧಿಯಲ್ಲಿ ಕೃಷಿ ಇಲಾಖೆ ನಿಗದಿಪಡಿಸಿದ ಭತ್ತ ನಾಟಿ ಗುರಿ ತಲುಪಿಲ್ಲ. ದ.ಕ ಜಿಲ್ಲೆಯಲ್ಲಿ ಒಟ್ಟು 6250 ಹೆಕ್ಟೇರ್ ಭತ್ತ ಬೆಳೆಯುವ ಗುರಿ ನಿಗದಿ ಪಡಿಸಿದ್ದು, ಕೇವಲ 2468 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಾಗಿದೆ. ಅಂದರೆ ಶೇ.39.48ರಷ್ಟು ಮಾತ್ರ ಗುರಿ ಸಾಧನೆ ಆಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 4010 ಹೆಕ್ಟೇರ್ ಗುರಿಯಲ್ಲಿ 3665 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಶೇ.91ರಷ್ಟು ಗುರಿ ಸಾಧಿಸಲಾಗಿದೆ ಎನುವುದು ಇಲಾಖೆಯ ಅಂಕಿ ಅಂಶ.
ಈ ಬಾರಿ ಸುಗ್ಗಿ ನಾಟಿ-ಬಿತ್ತನೆ ಅವಧಿಯಲ್ಲಿ ಉಭಯ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಾಡಿದ್ದ ‘ಬ್ರೌನ್ ಪ್ಲಾೃಂಟ್ ಹೋಪರ್’ ಕೀಟದಿಂದಾಗಿ ಆರಂಭದಲ್ಲೇ ರೈತರು ಸಂಕಷ್ಟ ಅನುಭವಿಸಿದ್ದರು. ಎರಡನೇ ಬಾರಿ ಬಿತ್ತನೆ ಮಾಡಿದ್ದ ರೈತರ ಬೆಳೆ ತಡವಾಗಿ ಬಂದಿದೆ. ಕಟಾವಿಗೆ ಇನ್ನೂ ಕೆಲವು ದಿನ ಬೇಕಾಗಬಹುದು. ಇದೇ ವೇಳೆ ರೋಗ ಪೀಡಿತ ಗದ್ದೆಗಳಲ್ಲಿ ಇಳುವರಿ ಶೇ.15-20ರಷ್ಟು ಕಡಿಮೆಯಾಗಲಿದೆ ಎನ್ನುವುದು ಕೃಷಿಕರ ಮಾತಾಗಿದೆ.
ಇನ್ನೇನು ಕಟಾವು ಆರಂಭ ಮಾಡಬೇಕು ಎನ್ನುವಷ್ಟರಲ್ಲಿ ಮಳೆಯ ಆಗಮನವಾಗಿದ್ದು, ಕಳೆದ ಶುಕ್ರವಾರ ಹಾಗೂ ಸೋಮವಾರ ವಿವಿಧೆಡೆ ಉತ್ತಮ ಮಳೆ ಸುರಿದಿದೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿರುವುದು ಮಾತ್ರವಲ್ಲದೆ ನಿದ್ದೆಗೆಡಿಸಿದೆ. ಕಟಾವಿಗೆ ಸಿದ್ಧವಾಗಿರುವ ಭತ್ತದ ಪೈರು ನಾಶವಾಗುವ ಭೀತಿ ಉಂಟಾಗಿದೆ. ಗದ್ದೆಯಲ್ಲಿ ನೀರು ನಿಂತರೆ ಮತ್ತಷ್ಟು ಸಮಸ್ಯೆಯಾಗುವುದರಿಂದ ಶೀಘ್ರ ಕಟಾವಿಗೆ ಮುಂದಾಗಿದ್ದಾರೆ.
ಬ್ರೌನ್ ಪ್ಲಾೃಂಟ್ ಹೋಪರ್’ ಕೀಟವನ್ನು ತಂಬಾಕು ನೀರು ಸಿಂಪಡಣೆ ಮಾಡುವ ಮೂಲಕ, ರಾಸಾಯನಿಕ ಬಳಸದೆ ಹತೋಟಿಗೆ ತರಲಾಗಿದೆ. ಆದರೂ ಬೆಳೆ ನಿರೀಕ್ಷೆಯಂತೆ ಕಡಿಮೆಯಾಗುವ ಸಾಧ್ಯತೆಯಿದೆ. ರೋಗ ಪೀಡಿತ ಪ್ರದೇಶಗಳಲ್ಲಿ ಕಟಾವು ಇನ್ನಷ್ಟೇ ಆರಂಭವಾಗಬೇಕಿದೆ. - ವಿಜಯ್ ಕುಮಾರ್ ಕಂಗಿನಮನೆ, ಕೃಷಿಕ ಚಳಿ ಕಡಿಮೆಯಿದ್ದರೂ, ಬಿಸಿಲು ಹಾಗೂ ನೀರು ಸಾಕಷ್ಟಿದ್ದ ಪರಿಣಾಮ ಈ ಬಾರಿ ಬೆಳೆ ಉತ್ತಮವಾಗಿದೆ. ಕಟಾವು ಕಾರ್ಯ ಸಂಪೂರ್ಣವಾದ ಬಳಿಕ ಬೆಳೆ ಹೇಗೆ ಬಂದಿದೆ ಅನ್ನುವ ಸಂಪೂರ್ಣ ಮಾಹಿತಿ ದೊರೆಯಲಿದೆ. - ಡಾ.ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ