ಜಿಲ್ಲೆ

ಆಡಳಿತ ಸರಳೀಕರಣಕ್ಕೆ ಸಲಹೆ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಕೈಗೊಂಡಿದ್ದ ಸಭೆಯಲ್ಲಿ ಭಾಗವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷರು.

ಚಿಕ್ಕಬಳ್ಳಾಪುರ ಡೆಸ್ಕ್


ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಅಧಿಕಾರಿಗಳ ಸಂವಾದ : ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ನಿಯಮಾನುಸಾರ ಮುಕ್ತವಾಗಿ ಕಾರ್ಯನಿರ್ವಹಿಸಲು ಸ್ವಾತಂತ್ರ, ಉತ್ತಮ ಆಡಳಿತಕ್ಕೆ ಸಿಬ್ಬಂದಿ ತೊಡಕು, ಕಾನೂನು ಮತ್ತು ಅಧಿಕಾರ ದುರ್ಬಳಕೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ನಿರ್ವಹಣೆ.
ಇವು ಜಿಲ್ಲಾಡಳಿತ ಭವನದಲ್ಲಿ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲೂಕು ವ್ಯಾಪ್ತಿಯ ಗ್ರಾಪಂಗಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯರು ಮತ್ತು ಉಪಾಧ್ಯರೊಂದಿಗೆ ಗುರುವಾರ ಆಯೋಜಿಸಿದ್ದ ಸಂವಾದದ ಪ್ರಮುಖ ವಿಚಾರಗಳು.
ಸಹಾಯಕ ಯೋಜನಾಧಿ-ಕಾರಿಗಳು, ಕಾರ್ಯನಿರ್ವಾಹಕ ಅಧಿ-ಕಾರಿಗಳು, ಸಹಾಯಕ ನಿರ್ದೇಶಕರು ಸೇರಿದಂತೆ ಹಲವರು ಹೊಸದಾಗಿ ಅಧಿಕಾರ ಸ್ವೀಕರಿಸಿದ ಸ್ಥಳಿಯ ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಿದರು. ಇದೇ ವೇಳೆ ಹಲವು ಸಮಸ್ಯೆಗಳು ಮತ್ತು ಆಡಳಿತ ಸುಧಾರಣೆಯ ಅಂಶಗಳ ಪ್ರಸ್ತಾಪವಾಯಿತು.
ಜಿಪಂ ಸಿಇಒ ಪ್ರಕಾಶ್​ ನಿಟ್ಟಾಲಿ, ಉಪ ಕಾರ್ಯದರ್ಶಿ ಎನ್​.ಭಾಸ್ಕರ್​ ಮತ್ತಿತರರು ಇದ್ದರು.


ಸಂವಾದದಲ್ಲಿ ಪಾಠ
ಸಂವಾದದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಜವಾಬ್ದಾರಿ, ಅಧಿಕಾರಿಗಳೊಂದಿಗೆ ಬಾಂಧವ್ಯ, ವಿವಿಧ ಯೋಜನೆಗಳ ಅನುಷ್ಠಾನ, ಅನುದಾನ ದುರ್ಬಳಕೆಗೆ ಕಡಿವಾಣ ಸೇರಿ ಹಲವು ವಿಚಾರಗಳ ಸುಧೀರ್ ಪಾಠ ಮಾಡಲಾಯಿತು. ಗಾಂ-ಧೀಜಿ ಕಂಡ ಕನಸು ನನಸಾಗಲು ಮೊದಲು ಗ್ರಾಮಗಳು ಸರ್ವಾಂಗೀಣ ಅಭಿವೃದ್ಧಿಯನ್ನು ಕಾಣಬೇಕು. ಈ ನಿಟ್ಟಿನಲ್ಲಿ ಆಯಾ ಗ್ರಾ.ಪಂ.ಗಳ ಪಾತ್ರ ಮಹತ್ತರವಾದುದು. ಜನರು ವಿಶ್ವಾಸವನ್ನಿಟ್ಟು ಜವಾಬ್ದಾರಿಯನ್ನು ನೀಡಿದ್ದಾರೆ. ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಬಾರದು. ಇನ್ನೊಬ್ಬರನ್ನು ಆವಲಂಬಿಸದೇ ಕರ್ತವ್ಯ, ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಅನುಮಾನಗಳಿದ್ದಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.


ಹುಷಾರ್​, ಶಿಕ್ಷೆ ಆಗುತ್ತೆ
ಗ್ರಾ.ಪಂ.ಗಳಲ್ಲಿ ಚೆಕ್​ಗಳಲ್ಲಿ ಸಹಿ, ಕಾನೂನು ಬಾಹಿರವಾಗಿ ಲೇಔಟ್​ಗಳಿಗೆ ಅನುಮೋದನೆ, ಕಳಪೆ ಕಾಮಗಾರಿಗಳು ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳ ನಿದರ್ಶನ ಸಮೇತ ವಿವರಿಸಲಾಯಿತು. ಅನುದಾನ ಖರ್ಚಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆಗೆ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಸರ್ಕಾರಿ ಅನುದಾನದ ಚೆಕ್​ಗಳಿಗೆ ಸಹಿ ಹಾಕುವ ಅಧಿಕಾರ ಇದೆ. ಇದೇ ವೇಳೆ ಸಮರ್ಪಕವಾಗಿ ಪರಿಶೀಲಿಸದಿದ್ದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಆರ್​ಟಿಇ ಕಾಯ್ದೆ ಜಾರಿಯಲ್ಲಿದ್ದು, 10 ವರ್ಷಗಳ ಹಿಂದಿನ ಕೆಲಸಗಳ ಬಗೆಗಿನ ಮಾಹಿಯನ್ನು ದಾಖಲೆ ಸಮೇತ ತಿಳಿದುಕೊಳ್ಳಬೇಕು. ಇದರಿಂದ ಅಧಿಕಾರಾವಧಿ ಮುಗಿದ ಬಳಿಕ ಆಡಳಿತದಲ್ಲಿನ ಅಕ್ರಮಗಳ ಹೊಣೆ ಹೊರಬೇಕಾಗಿಲ್ಲ ಎಂಬ ಧೋರಣೆ ಬಿಡಬೇಕು. ಯಾವಾಗ ಬೇಕಾದರೂ ತನಿಖೆಗೊಳಪಡಿಸಿ, ತಪ್ಪಿದ್ದಲ್ಲಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಬಹುದು. ಇದಕ್ಕೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಲಾಯಿತು.


ವಿವಿಧ ಯೋಜನೆಗಳ ಅರಿವು
ಸಂವಾದದಲ್ಲಿ ನರೇಗಾ, ವಿಶೇಷ ಹಣಕಾಸು ಯೋಜನೆ, ವಿಶೇಷ ಅನುದಾನ, ಸಂಪನ್ಮೂಲ ಕ್ರೋಢಿಕರಣ ಸೇರಿ ವಿವಿಧ ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು. ಸರ್ಕಾರದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟ್ಯಂತರ ರೂ. ಅನುದಾನ ಬಿಡುಗಡೆ, ಬಿರುಸಿನಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕೆಲಸಗಳು, ಸ್ಥಳಿಯವಾಗಿ ಜನರಿಗೆ ಸಿಕ್ಕ ಉದ್ಯೋಗಾವಕಾಶಗಳು, ಯೋಜನೆಗಳ ಅನುಕೂಲಗಳು ಮತ್ತು ಸಾಧನೆಗಳ ಬಗ್ಗೆ ವಿವರಿಸಲಾಯಿತು.


ಗಮನಸೆಳೆದ ಸಮಸ್ಯೆಗಳು
ಕರ ವಸೂಲಿ ನ್ಯೂನತೆ, ಸಿಬ್ಬಂದಿ ಕೊರತೆ, ಬಾಕಿ ಉಳಿದಿರುವ ಕೆಲಸಗಳು, ನಿರೀಕ್ಷೆಯ ಅನುದಾನದ ಬಗ್ಗೆ ಸಂವಾದದ ಮೂಲಕ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗಮನ ಸೆಳೆದರು.
ಗ್ರಾ.ಪಂ.ಗಳಲ್ಲಿ ಕರ ವಸೂಲಾತಿಗೆ ಸಂಬಂಧಿಸಿದಂತೆ ಆನ್​ಲೈನ್​ ಪಾವತಿ ವೇಳೆ ಫಲಾನುಭವಿಯ ಹೆಸರು, ಆಸ್ತಿ ಖಾತೆ ಮಾಹಿತಿ ಲಭ್ಯವಾಗುತ್ತಿಲ್ಲ. ಐಡಿಯ ಮೂಲಕ ಹಣ ಸ್ವೀಕರಿಸಲಾಗುತ್ತಿದೆ. ಇದರಿಂದ ಜನರಲ್ಲಿ ಗೊಂದಲವಾಗುತ್ತಿದೆ ಎಂದು ಮಂಚನಬಲೆ ಗ್ರಾ.ಪಂ.ಅಧ್ಯಕ್ಷ ಮಂಚನಬಲೆ ಶ್ರೀಧರ್​ ತಿಳಿಸಿದರೆ, ಆಯಾ ಗ್ರಾ.ಪಂ.ಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಗುವ ವಾತಾವರಣವಿರಬೇಕು. ಇದರಲ್ಲಿ ಕಾನೂನು ನಿಯಮಗಳ ನೆಪದಲ್ಲಿ ಅಡ್ಡಿಪಡಿಸುವ ಪ್ರವೃತ್ತಿ ದೂರವಾಗಬೇಕು ಎಂದು ಮಂಡಿಕಲ್ಲು ಗ್ರಾ.ಪಂ.ಅಧ್ಯಕ್ಷ ರಾಮಕೃಷ್ಣ ಮನವಿ ಮಾಡಿದರು. ಇನ್ನು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ವಸತಿ ರಹಿತರಿಗೆ ನಿವೇಶನಗಳ ಹಂಚಿಕೆ ಸಂಬಂಧ ಹೊಸಹುಡ್ಯ ಗ್ರಾ.ಪಂ.ಅಧ್ಯಕ್ಷ ಎಂ.ಮಂಜುನಾಥ್​ ಗಮನ ಸೆಳೆದರು.