ಜಿಲ್ಲೆ

ಆಲೆಮನೆಗಳಿಂದಲೇ ತುಂಬಿದ್ದ ಸುಗ್ಗನಹಳ್ಳಿ

ಮೈಸೂರು ಮಹಾರಾಜರಿಂದ ಬಿರುದು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಗ್ರಾಮ ನದಿಯ ಜಾಡು ಹಿಡಿದ ಗ್ರಾಮಸ್ಥರು

ವಿಭೂತಿಕೆರೆ ಶಿವಲಿಂಗಯ್ಯ, ರಾಮನಗರ

ಎತ್ತ ನೋಡಿದರೂ ಬೆಲ್ಲ ತಯಾರಿಸುವ ಆಲೆಮನೆಗಳಿಂದಲೇ ತುಂಬಿದ್ದ ಸುಗ್ಗೇನಹಳ್ಳಿ ಇಂದು ಪ್ರಮುಖ ಕೃಷಿ ಚಟುವಟಿಕೆ ಗ್ರಾಮವಾಗಿ, ರಾಜಕೀಯ ಕೇಂದ್ರವಾಗಿ ಗುರುತಿಸಿಕೊಂಡು ವ್ಯಾಪಾರ ವಹಿವಾಟಿನ ಕ್ಷೇತ್ರವಾಗಿ ಬೆಳೆದುನಿಂತು ಪ್ರಸ್ತುತ ಸುಗ್ಗನಹಳ್ಳಿ ಎಂದು ಹೆಸರಾಗಿದೆ.

ಜಿಲ್ಲೆಯ ಮೂಲೆಮೂಲೆಗಳಲ್ಲೂ ಸುಗ್ಗನಹಳ್ಳಿ ತನ್ನ ಹೆಸರನ್ನು ಪಸರಿಸಿದ್ದು, ಅರ್ಕಾವತಿ ನದಿ ದಂಡೆಯಲ್ಲಿ ಹರಿಯುವ ನೀರಿನ ಝರಿಯ ಸದ್ದು ಕೇಳುತ್ತಾ ಪ್ರಕೃತಿ ವನಸಿರಿ ಮಧ್ಯೆ ಸದಾ ಹಸಿರನ್ನೇ ಹಾಸು ಹೊದ್ದಿರುವ ಜತೆಗೆ ತನ್ನದೇ ಮೂಲ ಇತಿಹಾಸ ಹೊಂದಿರುವ ಗ್ರಾಮದಲ್ಲಿ ಎಲ್ಲ ವರ್ಗದ ಜನರು ಸೌಹಾರ್ದತೆಯಿಂದ ಬದುಕು ಕಟ್ಟಿಕೊಂಡಿರುವುದು ಮತ್ತೊಂದು ವಿಶೇಷ.

1960ರಲ್ಲೇ ಆರೋಗ್ಯ ಕೇಂದ್ರ

ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ಅಂತರದಲ್ಲಿರುವ ಸುಗ್ಗನಹಳ್ಳಿಗೆ 1960ರಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ, ರೇಷ್ಮೆ ಇಲಾಖೆ, ರೈತ ಸಂಪರ್ಕ ಕೇಂದ್ರ, ವಿದ್ಯುತ್ ಸಂಪರ್ಕ, ಕೆನರಾ ಬ್ಯಾಂಕ್ ಪ್ರಾರಂಭದ ಜತೆಗೆ ಸಾರಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಬರುತ್ತಿದ್ದ ಬಸ್ ಸುಗ್ಗನಹಳ್ಳಿಯ ಮೂಲಕ ರಾಮನಗರಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಪ್ರಸ್ತುತ ಬಿಎಂಟಿಸಿ ಬಸ್ ಸಂಪರ್ಕವನ್ನು ಸುಗ್ಗನಹಳ್ಳಿ ಹೊಂದಿದೆ.

ಕೆಂಗಲ್ ಹನುಮಂತಯ್ಯ ಶಿಕ್ಷಣ ಪಡೆದ ಶಾಲೆ

1910ರಲ್ಲಿ ಆರಂಭಿಸಲಾದ ಮಾಧ್ಯಮಿಕ ಶಾಲೆಯಲ್ಲಿ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಶಿಕ್ಷಣ ಪಡೆದ ಪಡೆದಿದ್ದರು. ಜತೆಗೆ ಗ್ರಾಮದ ಮುದ್ದುಬಸವಯ್ಯ ಎಂಬುವರು ಮೈಸೂರು ಸಂಸ್ಥಾನದ ಸದಸ್ಯರಾಗಿದ್ದರು ಎನ್ನಲಾಗಿದೆ.

ಗ್ರಾಮದ ಇತಿಹಾಸ

ಗ್ರಾಮದಲ್ಲಿ ಹರಿಯುವ ಅರ್ಕಾವತಿ ನದಿಗೆ ಅಡ್ಡಲಾಗಿ ದೊಡ್ಡ ಆಣೆಕಟ್ಟು ನಿರ್ಮಿಸಲಾಗಿತ್ತು. ಇಲ್ಲಿಂದ ನೀರಾವರಿ ಮೂಲಕ ಗ್ರಾಮದ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ಹೆಚ್ಚಾಗಿ ಕಬ್ಬು ಬೆಳೆಯುತ್ತಿದ್ದರಿಂದ ಸುಗ್ಗನಹಳ್ಳಿಯಲ್ಲಿ 80ಕ್ಕೂ ಹೆಚ್ಚು ಆಲೆಮನೆಗಳಿದ್ದು, ಬೆಲ್ಲ ತಯಾರಿಕೆಗೆ ಹೆಸರುವಾಸಿಯಾದ ಗ್ರಾಮವಾಗಿತ್ತು. 1985ರ ದಶಕದವರೆಗೂ ಬೆಲ್ಲ ತಯಾರಿಸಲಾಗುತ್ತಿತ್ತು ಎನ್ನಲಾಗಿದ್ದು, ನಂತರದ ದಿನಗಳಲ್ಲಿ ಕಬ್ಬು ಬೆಳೆ ಅಪರೂಪವಾದ ಕಾರಣ ಆಲೆಮನೆಗಳು ನೇಪಥ್ಯಕ್ಕೆ ಸರಿದವು ಎಂದು ಹೇಳುತ್ತಾರೆ ಗ್ರಾಪಂ ಉಪಾಧ್ಯಕ್ಷ ಚಿಕ್ಕಸ್ವಾಮಿ.

ಬಿರುದು

ಮೈಸೂರು ಮಹಾರಾಜರು ಗ್ರಾಮಕ್ಕೆ ಬಂದಾಗ ಗ್ರಾಮದಲ್ಲಿನ ಆಲೆಮನೆ, ಕಬ್ಬು, ಭತ್ತ, ಕೃಷಿ ಚಟುವಟಿಕೆ ನೋಡಿ ಹಿಗ್ಗಿದ್ದರಂತೆ. ಇಡೀ ಗ್ರಾಮವೇ ಸುಗ್ಗಿ ಕಾಲದಂತೆ ಮಹಾರಾಜರಿಗೆ ಕಂಡು ಗ್ರಾಮಕ್ಕೆ ಮಾದರಿ ಗ್ರಾಮದ ಬಿರುದನ್ನು ಸಹ ನೀಡಿದ್ದಾರೆ ಎನ್ನಲಾಗಿದೆ. ಆ ಬಿರುದು ಈಗಲೂ ಗ್ರಾ.ಪಂನಲ್ಲಿದೆ ಎನ್ನುತ್ತಾರೆ ಗ್ರಾಮದ ರಾಮಕೃಷ್ಣಯ್ಯ.

ಸುಗ್ಗನಹಳ್ಳಿ ಹೆಸರು

ವರ್ಷದ ಎಲ್ಲ ದಿನಗಳಲ್ಲೂ ಕೃಷಿ ಚಟುವಟಿಕೆಯಿಂದ ಕೂಡಿದ್ದ ಗ್ರಾಮಕ್ಕೆ ಸುಗ್ಗೇನಹಳ್ಳಿ ಎಂದು ಕರೆಯುತ್ತಾ ಬರಲಾಗಿದೆ. ಈಗಲೂ ಬ್ಯಾಂಕ್ ಸುಗ್ಗೇನಹಳ್ಳಿ ಎಂಬ ಹೆಸರಿನಲ್ಲೇ ವಹಿವಾಟು ನಡೆಸುತ್ತಿದೆ. ನಂತರ ಜನರ ಆಡು ಭಾಷೆಯಲ್ಲಿ ಸುಗ್ಗೇನಹಳ್ಳಿ ಹೋಗಿ ಸುಗ್ಗನಹಳ್ಳಿಯಾಗಿದೆ.

ಪ್ರಮುಖ ವ್ಯಾಪಾರ ಕೇಂದ್ರ

ಸುತ್ತಮುತ್ತಲ ಪ್ರದೇಶಕ್ಕೆ ಸುಗ್ಗನಹಳ್ಳಿಯು ಕೇಂದ್ರ ಸ್ಥಾನದಲ್ಲಿದ್ದು. ಅರ್ಕಾವತಿ ನದಿ ಒಂದು ಅಂಚಿನಲ್ಲಿ ಗ್ರಾಮವಿದ್ದರೆ ಮತ್ತೊಂದು ದಡದಲ್ಲಿ ಸುಗ್ಗನಹಳ್ಳಿ ಸರ್ಕಲ್ ಇದೆ. ತೆಗೆ ಅಕ್ಕಪಕ್ಕದ ಗ್ರಾಮಗಳಿಗೆ ಬೆಸೆದುಕೊಂಡಿರುವ ಕಾರಣ ಪೆಟ್ರೋಲ್ ಬಂಕ್, ಹೋಟೆಲ್, ಪ್ರಮುಖ ವಾಣಿಜ್ಯ ಮಳಿಗೆಗಳು, ಬೇಕರಿ, ಖಾಸಗಿ ಕ್ಲಿನಿಕ್, ಆಭರಣ, ಬಟ್ಟೆ, ಟೈಲರ್, ಮೆಡಿಕಲ್, ಗೊಬ್ಬರ, ಎಲೆಕ್ಟ್ರಿಕ್, ಗೃಹಪಯೋಗಿ ಮಾರಾಟ ಅಂಗಡಿ, ಕಿರಾಣಿ ಅಂಗಡಿಗಳು, ಬಣ್ಣ, ತರಕಾರಿ, ಚಿಲ್ಲರೆ ಅಂಗಡಿಗಳಿವೆ. ಆಗಿದ್ದ ಸುಗ್ಗೇನಹಳ್ಳಿಗೂ ಇಂದಿನ ಸುಗ್ಗನಹಳ್ಳಿ ಸರ್ಕಲ್‌ಗೂ ಊಹೆಗೂ ನಿಲುಕದ ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿದೆ. ಸ್ಥಳೀಯರಲ್ಲದೆ ಹೊಗಿನವರು ಕೂಡ ವ್ಯಾಪಾರದಲ್ಲಿ ತೊಡಗಿ ಬದುಕು ಕಟ್ಟಿಕೊಂಡಿದ್ದಾರೆ.

ಕಟ್ಟಡಗಳು: ಗ್ರಾಮದಲ್ಲಿ ಬಹುತೇಕ ಮಣ್ಣಿನ ಗೋಡೆ, ನಾಡಹೆಂಚು, ಗರಿಶೆಡ್ ನಂತರ ದಿನಗಳಲ್ಲಿ ಮಂಗಳೂರು ಹೆಂಚು ಹೊಂದಿದ ಗ್ರಾಮ ಇಂದು ವಾಣಿಜ್ಯ ಕಟ್ಟಡವಾಗಿದೆ. ಆರ್‌ಸಿಸಿ ಬಿಲ್ಡಿಂಗ್‌ಗಳು ತಲೆ ಎತ್ತಿವೆ. ನಿಧಾನವಾಗಿ ಸಣ್ಣ ಪೇಟೆಯಾಗಿ ಬೆಳೆದು ಬರುತ್ತಿದ್ದು ಜನಸಂಖ್ಯೆ, ಕ್ಷೇತ್ರ ವಿಸ್ತಾರ, ಸರ್ಕಾರ ಮಾರ್ಗಸೂಚಿಗಳು ಬದಲಾದರೆ ಮುಂದೊಂದು ದಿನ ಸುಗ್ಗನಹಳ್ಳಿ ಹೋಬಳಿ ಕೇಂದ್ರವಾಗಿ ಕಾಣುವ ದಿನಗಳು ದೂರವಿಲ್ಲ.

ಗ್ರಾಮದಲ್ಲಿರುವ ದೇವಾಲಯಗಳು

ವೀರಭದ್ರಸ್ವಾಮಿ, ಆಂಜನೇಯಸ್ವಾಮಿ, ಚಿಕ್ಕಮ್ಮ, ಮಾಸ್ತಮ್ಮ, ಬೈರವೇಶ್ವರ, ರಾಮೇಲಿಂಗು, ಈಶ್ವರ, ಚಾಮುಂಡೇಶ್ವರಿ, ಶನೈಶ್ಚರಸ್ವಾಮಿ, ಮಾರಮ್ಮ, ಕೆಲಗೇರಮ್ಮ ದೇವಾಲಯಗಳಿವೆ. ಹಬ್ಬದ ದಿನಗಳಲ್ಲಿ ಪೂಜೆ ಪುನಸ್ಕಾರಗಳು ಜಾತ್ರೆ, ಉತ್ಸವಗಳು ನಡೆಯುತ್ತವೆ.

ಸುಗ್ಗನಹಳ್ಳಿ ಇಂದು ಜಿಲ್ಲೆಯಲ್ಲಿಯೇ ಪ್ರಾಮುಖ್ಯತೆ ಪಡೆದ ಗ್ರಾಮವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಬೆಲ್ಲ ತಯಾರಿಕೆಯಲ್ಲಿ ಹೆಸರು ಮಾಡಿದ ಗ್ರಾಮ. ಇಂಥ ಗ್ರಾಮದಲ್ಲಿ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಶಿಕ್ಷಣ ಪಡೆದಿರುವುದು ಹಾಗೂ ಗ್ರಾಮಕ್ಕೆ ಮೈಸೂರು ಮಹಾರಾಜರು ಬಂದು ಮಾದರಿ ಗ್ರಾಮ ಬಿರುದು ನೀಡಿರುವುದು ಮತ್ತಷ್ಟು ಹೆಮ್ಮೆ ತಂದಿದೆ.ಮಹದೇವ್, ಗ್ರಾಮಸ್ಥ
ಪ್ರಸ್ತುತ ದಿನಗಳಲ್ಲಿ ಸುಗ್ಗನಹಳ್ಳಿ ವ್ಯಾಪಾರ, ವಾಣಿಜ್ಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಪೂರಕವಾಗಿ ಗ್ರಾಮ ಪಂಚಾಯಿತಿಯು ಮೂಲಸೌಕರ್ಯ ಒದಗಿಸಿದೆ. ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು ಒಗಿಸುತ್ತಾ ಬಂದಿದೆ. ಗ್ರಾಮವನ್ನು ವಾಣಿಜ್ಯ ನಗರವನ್ನಾಗಿ ಬೆಳೆಸಬೇಕು. ಸ್ಥಳೀಯ ಜನರಿಗೆ ಮತ್ತಷ್ಟು ಮೂಲಸೌಲಭ್ಯ ಕಲ್ಪಿಸಲು ಗ್ರಾಪಂ ವಿಶೇಷ ಕಾಳಜಿ ವಹಿಸುತ್ತಾ ಬಂದಿದೆ.ಅರ್ಪಿತಾ, ಗ್ರಾಪಂ ಅಧ್ಯಕ್ಷೆ, ಸುಗ್ಗನಹಳ್ಳಿ