ಮದ್ದೂರು: ತಾಲೂಕಿನ ಕೊಪ್ಪ ಹೋಬಳಿಯ ಎಸ್.ಎಸ್.ಎಲ್. ಸಕ್ಕರೆ ಕಾರ್ಖಾನೆಯು ಅವಧಿ ಮುಗಿದರೂ ಕಬ್ಬನ್ನು ನುರಿಸದ ಕಾರಣ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಕಬ್ಬು ಒಣಗುತ್ತಿದ್ದು, ರೈತರು ನಷ್ಟ ಅನುಭವಿಸುವ ಭೀತಿಗೆ ಸಿಲುಕಿದ್ದಾರೆ.
ಕೌಡ್ಲೆ, ಕೊಪ್ಪ, ನಂಬಿನಾಯಕನಹಳ್ಳಿ, ಹುರಗಲವಾಡಿ, ಹರಳಕೆರೆ, ರಾಯಶೆಟ್ಟಿಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆದಿರುವ ಕಬ್ಬಿಗೆ ಅವಧಿ ಮುಗಿದಿದ್ದರೂ ಹಾಗೂ ಕಬ್ಬು ಕಡಿಯಲು ಕಾರ್ಖಾನೆಯಿಂದ ಒಪ್ಪಿಗೆ ತೆಗೆದುಕೊಂಡಿದ್ದರೂ ನಿಗದಿತ ಸಮಯಕ್ಕೆ ಕಬ್ಬು ಅರೆಯುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕೌಡ್ಲೆ ಗ್ರಾಮದಲ್ಲಿ 500 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಆದರೆ ಕಬ್ಬು ಕಡಿಯಲು ಮತ್ತು ಸರಬರಾಜು ಮಾಡಿ ನುರಿಸಲು ಕಾರ್ಖಾನೆ ಅಧಿಕಾರಿಗಳು, ಸೂಪರ್‌ವೈಸರ್‌ಗಳು ಹಾಗೂ ಫೀಲ್ಡ್‌ಮನ್‌ಗಳು ಮೀನಮೇಷ ಎಣಿಸುತ್ತಿದ್ದಾರೆ. ಕೂಲಿ ಹಾಳು ಹಾಗೂ ಇತರ ಸಮಸ್ಯೆಯಿಂದ 15 ರಿಂದ 16 ತಿಂಗಳು ಕಳೆದರೂ ಕಬ್ಬು ನುರಿಸಲು ಕ್ರಮ ಕೈಗೊಳ್ಳದ ಪರಿಣಾಮ ತೂಕ ಕಡಿಮೆಯಾಗಿ ಬೆಳೆಗಾರರಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬ್ಬಿನ ಕಡಿಗೂಲಿ ಹೆಚ್ಚಳ: ಟನ್ ಕಬ್ಬು ಕಡಿಯಲು ಮೊದಲು 400 ರೂ. ಇತ್ತು. ಈಗ 650 ರೂ.ಗಳಾಗಿದೆ. ಕಡುಗೂಲಿಯನ್ನು ಇಷ್ಟ ಬಂದಂತೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಇಂತಿಷ್ಟು ಹಣ ಎಂದು ನಿಗದಿಪಡಿಸದ ಕಾರಣ ಕೆಲವೊಮ್ಮೆ ಟನ್ ಕಬ್ಬಿಗೆ ಕಡುಗೂಲಿ 900 ರಿಂದ 1 ಸಾವಿರ ರೂ. ಕೇಳುತ್ತಿದ್ದಾರೆಂದು ಆಪಾದಿಸಿರುವ ರೈತರು, ಎನ್.ಎಸ್.ಎಲ್. ಕಾರ್ಖಾನೆಯವರು ಬೇರೆ ತಾಲೂಕಿನ ಕಬ್ಬನ್ನು ನುರಿಸುತ್ತಾರೆ. ಆದರೆ, ನಮ್ಮ ತಾಲೂಕಿನ ಕಬ್ಬು ನುರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದು ವರ್ಷದ ಬೆಳೆ ನಷ್ಟ: ಕಾರ್ಖಾನೆಯವರು 12 ತಿಂಗಳಿಗೆ ಕಬ್ಬು ನುರಿಸದೆ 14 ರಿಂದ 15 ತಿಂಗಳಿಗೆ ಕಡಿಸುತ್ತಿರುವುದರಿಂದ ಮೂರು ವರ್ಷಕ್ಕೆ 2 ಬೆಳೆಯನ್ನು ಮಾತ್ರ ಬೆಳೆಯುವಂತಾಗಿದೆ. ಇದರಿಂದ ಒಂದು ವರ್ಷದ ಬೆಳೆ ಬೆಳೆಯಲು ಸಾಧ್ಯವಾಗದೆ ನಷ್ಟವಾಗುತ್ತಿದೆ. ಟನ್ ಕಬ್ಬಿಗೆ 2755 ರೂ. ಅಡ್ವಾನ್ಸ್ ನೀಡಲಾಗುತ್ತಿದೆ. ಆದರೆ ಟನ್ ಕಬ್ಬಿನ ಕಡುಗೂಲಿಗೆ ಅಂದಾಜು 1 ಸಾವಿರ ರೂ. ಕೊಡಬೇಕು. ಕಬ್ಬು ಬೆಳೆಯಲು ರಸಗೊಬ್ಬರ, ಕೂಲಿ, ಕಳೆ ಕೀಳಿಸುವುದು, ಔಷಧ ಸಿಂಪಡಣೆ ಸೇರಿದಂತೆ ಇನ್ನಿತರ ಖರ್ಚುಗಳನ್ನು ಗಮನಿಸಿದರೆ ಕಬ್ಬು ಬೆಳೆಯವುದರಿಂದ ಯಾವುದೇ ಲಾಭವಿಲ್ಲ ಎನ್ನುತ್ತಾರೆ ರೈತರು.
ಈ ಬಗ್ಗೆ ಪ್ರತಿಕ್ರಿಯಿಸಿದ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯ ಹಿರಿಯ ವ್ಯವಸ್ಥಾಪಕ ಸೋಮಶೇಖರ್, ಮಳೆಯಾಗುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಕೂಳೆ ಕಬ್ಬು ಹಾಳಾಗುತ್ತದೆ ಎಂಬ ಉದ್ದೇಶಕ್ಕೆ ಕಬ್ಬು ಕಟಾವು ಮಾಡಿಲ್ಲ. ಮಳೆ ಕಡಿಮೆಯಾದ ನಂತರ ಒಪ್ಪಿಗೆ ಪಡೆದುಕೊಂಡಿರುವ ಎಲ್ಲ ಕಬ್ಬನ್ನು ನುರಿಸಲು ಕ್ರಮ ಕೈಗೊಳ್ಳಲಾಗುವುದು. ಕಬ್ಬು ಬೆಳೆಗಾರರು ಆತಂಕಕ್ಕೆ ಒಳಾಗುವುದು ಬೇಡ ಎಂದಿದ್ದಾರೆ.