ಧಾರವಾಡ: ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ. ಕಬ್ಬಿಗೆ ದರ ನಿಗದಿ ಮಾಡುವ ಸಂಬಂಧ ಸಿಎಂ ಅವರು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಕರೆದಿದ್ದಾರೆ. ಈ ಸಭೆಯ ಯಶಸ್ವಿಯಾಗಲಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಮೊದಲು ಸಚಿವ ಎಚ್.ಕೆ.ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಕೂಡ ರೈತರ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರನ್ನು ಮಾತನಾಡಿಸಿ ಹೋಗಿದ್ದಾರೆ. ಇಂದು ಸಿಎಂ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಮಾತುಕತೆಗೆ ಕರೆದಿದ್ದಾರೆ. ಕಬ್ಬು ರೈತರದ್ದು, ಅದನ್ನು ಅರಿಯೋದು ಕಾರ್ಖಾನೆಯವರು. ಹೀಗಾಗಿ ದರ ನಿಗದಿ ಇಬ್ಬರೂ ಒಪ್ಪಬೇಕು. ಕಬ್ಬಿಗೆ ಕೇಂದ್ರ ಸರ್ಕಾರ ಬೆಲೆ ನಿಗದಿ ಮಾಡಬೇಕು. ಹೀಗಾಗಿ ಕೇಂದ್ರಕ್ಕೂ ಪತ್ರ ಬರೆಯುವುದಾಗಿ ಸಿಎಂ ಹೇಳಿದ್ದಾರೆ ಎಂದರು.
ಕಬ್ಬಿಗೆ ಬೆಂಬಲ ಬೆಲೆ ಕೊಡಬಹುದು. ಹಿಂದೆ ಪ್ರಕಾಶ ಹುಕ್ಕೇರಿ ಸಚಿವರಿದ್ದಾಗ ಒಮ್ಮೆ ಬೆಂಬಲ ಬೆಲೆ ಕೊಡಲಾಗಿದೆ. ಅದಾದ ನಂತರ ಕೊಟ್ಟಿಲ್ಲ. ಸಕ್ಕರೆ ದರ ಕೇಂದ್ರ ಸರ್ಕಾರ ನಿಗದಿ ಮಾಡುತ್ತದೆ. ಕಬ್ಬು ತೆಗೆದುಕೊಳ್ಳುವುದು ಕಾರ್ಖಾನೆಯವರು, ಹೀಗಾಗಿ ರೈತರು ಹಾಗೂ ಕಾರ್ಖಾನೆ ಮಾಲೀಕರ ಮಧ್ಯೆ ಮಾತುಕತೆ ಆಗಬೇಕು. ಕೆಲವು ರಾಜಕಾರಣಿಗಳು ಸಕ್ಕರೆ ಕಾರ್ಖಾನೆ ಮಾಲೀಕರು ಇರಬಹುದು. ಎಲ್ಲ ಕಾರ್ಖಾನೆಗೆ ರಾಜಕಾರಣಿಗಳೇ ಮಾಲೀಕರಾಗಿರುವುದಿಲ್ಲ. ಸರ್ಕಾರ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಅದಕ್ಕೆ ಕಾಲ ಉತ್ತರ ಕೊಡಲಿದೆ ಎಂದರು.