ಸಿಂದಗಿ: ಕಬ್ಬು ಬೆಳೆಗಾರರಿಗೆ ಕಬ್ಬಿನ ಟೋಳಿಗಳು ಸಿಗದೆ ಕಬ್ಬು ಕಟಾವು ಸಮಸ್ಯೆ ಎದುರಿಸುತ್ತಿದ್ದರು. ಆದರೆ ಈ ಕಬ್ಬು ಕಟಾವ್ ಮಷಿನ್ ಅವರ ಸಮಸ್ಯೆಗೆ ಪರಿಹಾರವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯಲ್ಲಿ ಆಹೇರಿ ಗ್ರಾಮದ ಮಹಿಬೂಬಸಾಬ ರಂಜುಣಗಿ, ಚಟ್ಟರಕಿಯ ಹಣಮಂತ್ರಾಯ ಅಮರಪ್ಪಗೋಳ ಅವರಿಗೆ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಕಬ್ಬು ಕಟಾವ್ ಮಷಿನ್ ವಿತರಿಸಿ ಮಂಗಳವಾರ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಐದು ಸಕ್ಕರೆ ಕಾರ್ಖಾನೆಗಳಿದ್ದು, ಅಂದಾಜು 14 ಲಕ್ಷ ಹೆಕ್ಟೇರ್ ಕಬ್ಬು ಬೆಳೆಯಲಾಗುತ್ತಿದೆ. ಬೆಳಗಾರರು ಹೊರ ರಾಜ್ಯದಿಂದ ಕಬ್ಬಿನ ಟೋಳಿಗಳನ್ನು ಕರೆ ತರುವುದು, ರೈತರಿಗೆ ಮೋಸ ನಡೆದಿರುವ ಘಟನೆಗಳನ್ನು ಕೇಳಿದ್ದೇವೆ. ಈ ಮಷಿನ್ ಮೂಲಕ ಆ ಸಮಸ್ಯೆ ನೀಗಿದೆ. ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತ್ತು. ನಂತರದ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು. ಈಗ ಮತ್ತೆ ಆರಂಭವಾದ ಯೋಜನೆಯನ್ನು ಕಬ್ಬು ಬೆಳೆಗಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ ಮಾತನಾಡಿ, ಈ ಮಷಿನ್ ಬೆಲೆ ರೂ. 96 ಲಕ್ಷ ರೂ. ಇದೆ. ಸಾಮಾನ್ಯ ವರ್ಗದವರಿಗೆ 40 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 50 ಲಕ್ಷ ರೂ. ರಿಯಾಯಿತಿ ಲಭ್ಯವಿದೆ. ಈಗಾಗಲೇ ಬೇಡಿಕೆ ಇಟ್ಟ ಮೂರು ಜನ ಲಾನುಭವಿಗಳಲ್ಲಿ ಇಬ್ಬರಿಗೆ ಮಷಿನ್ ವಿತರಿಸಲಾಗಿದೆ. ಆಸಕ್ತರು ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಮತ್ತು ಸೌಲಭ್ಯ ಪಡೆಯಬಹುದು ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ತಹಸೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ, ರೈತ ಮುಖಂಡರು, ಕೃಷಿ ಇಲಾಖೆ ಅಧಿಕಾರಿ ಶಿವಾನಂದ ಹೂವಿನಹಳ್ಳಿ, ಸಿಬ್ಬಂದಿ ಇದ್ದರು.