ಮೈಸೂರು: ಕಬ್ಬು ಬೆಳೆಗೆ ನಿಗದಿ ಪಡಿಸಿರುವ ಎಫ್‌ಆರ್‌ಪಿ ದರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ನೇತೃತ್ವ ದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಸುತ್ತ ಮಂಗಳವಾರ ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ಪಂಜಾಬ್‌ನಲ್ಲಿ ಟನ್ ಕಬ್ಬಿಗೆ 3800 ರೂ., ಉತ್ತರ ಪ್ರದೇಶದಲ್ಲಿ 3500 ರೂ., ಗುಜರಾತ್‌ನಲ್ಲಿ 4400 ರೂ. ದರ ನಿಗದಿ ಮಾಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಕನಿಷ್ಠ ಟನ್ ಕಬ್ಬಿಗೆ 3,500 ರೂ.ನಿಗದಿ ಮಾಡಬೇಕು. ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. 16 ತಿಂಗಳು ಕಳೆದರೂ ಕಬ್ಬು ಕಟಾವು ಆಗುತ್ತಿಲ್ಲ. ವಿಳಂಬದ ಅವಧಿಗೆ ಬಡ್ಡಿ ಸೇರಿಸಿ ಹೆಚ್ಚುವರಿ ದರ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ಕಡಿತಗೊಳಿಸಬೇಕು, ಸಕ್ಕರೆ ಕಾರ್ಖಾನೆಯ ಫೀಲ್ಡ್‌ಮನ್‌ಗಳು ಬಿಲ್ನಲ್ಲಿ ನೋಂದಾಯಿಸದೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ನಿಲ್ಲಬೇಕು, ರೈತ ಮತ್ತು ಕಾರ್ಖಾನೆ ನಡುವೆ ಸರ್ಕಾರ ಜಾರಿಗೆ ತಂದಿರುವ ದ್ವಿಪಕ್ಷೀಯ ಪತ್ರ ಒಪ್ಪಂದವಾಗಬೇಕು, ಕೃಷಿ ಲಾಭದಾಯಕ ಆಗುವವರೆಗೂ ರೈತರ ಎಲ್ಲ ಸಾಲ ಗಳು ಮನ್ನಾ ಮಾಡಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ರೈತರು ಹಾಗೂ ಕೃಷಿ ಅವಲಂಬಿತ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ನೀಡ ಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಪಿ ಸೋಮಶೇಖರ್, ಬರಡನಪುರ ನಾಗರಾಜ್, ಅತ್ತಹಳ್ಳಿ ದೇವರಾಜ್, ಡಿ. ಕಾಟೂರು ಮಹದೇವ ಸ್ವಾಮಿ, ಕುರುಬೂರು ಸಿದ್ದೇಶ್, ಕಿರಗಸೂರು ಶಂಕರ್, ಪ್ರಸಾದ್ ನಾಯಕ ಹಾಗೂ ಇತರರು ಪಾಲ್ಗೊಂಡಿದ್ದರು.