ಜಿಲ್ಲೆ

ಪ್ರತಿ ಟನ್‌ ಕಬ್ಬಿಗೆ 3200 ರೂ. ಬೆಲೆ ನಿಗದಿ

Uttara Kannada - Subash Hegde
ಹಳಿಯಾಳ: ಕಬ್ಬು ಬೆಳೆಗಾರ ರೈತರ  5 ದಿನಗಳ ಅಹೋರಾತ್ರಿ ಹೋರಾಟ ಮತ್ತು ರಸ್ತಾರೊಖೊ‌ ಚಳುವಳಿಯ ಫಲವಾಗಿ ಇಂದು ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ 3200 ರೂ. ದರ ನೀಡುವುದಾಗಿ ಘೋಷಣೆ ಮಾಡುವ ಮೂಲಕ ಕಬ್ಬು ಬೆಳೆಗಾರ ರೈತರಿಗೆ ಜಯ ದೊರಕಿದಂತಾಗಿದೆ.
ಹಳಿಯಾಳದ ಹುಲ್ಲಟ್ಟಿ ಪ್ರದೇಶದಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಪ್ರಸಕ್ತ ಸಾಲಿನ ಕಬ್ಬು  ನುರಿಸುವ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ 3050 ರೂ. ಘೋಷಿಸಿದ್ದರು ಆದರೇ ಇದಕ್ಕೆ‌ ಕಬ್ಬು ಬೆಳೆಗಾರರು ಒಪ್ಪದೆ ಹೋರಾಟ ಆರಂಭಿಸಿದಾಗ ಎರಡು ಸುತ್ತಿನ ಮಾತುಕತೆಯಲ್ಲಿ ಕಾರ್ಖಾನೆಯವರು  ಒಟ್ಟೂ 70 ರೂ. ದರ ಏರಿಸಿ 3120 ರೂ.ಗೆ ತಲುಪಿದ್ದರು ಹಾಗೆಯೇ  3363 ರೂ. ಗೆ ಬೇಡಿಕೆ ಇಟ್ಟಿದ್ದ ರೈತರು 3300 ರೂ. ನೀಡುವಂತೆ ಆಗ್ರಹಿಸಿದ್ದರು.
ರೈತರು ಮತ್ತು ಕಾರ್ಖಾನೆಯ ನಡುವೆ ಕಳೆದ 10 ದಿನಗಳಿಂದ ನಡೆದ ದರ ಸಮರ ಕೊನೆಗೆ ಶುಕ್ರವಾರ ಪಟ್ಟಣದ ತಾಲೂಕಾ ಆಡಳಿತ ಸೌಧದಲ್ಲಿ ಉಕ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಬಾರಿಯ  ಹಲವು ಸುತ್ತಿನ ಸಭೆಯಲ್ಲಿ  ಕಾರ್ಖಾನೆ 3200 ರೂ. ದರ‌ ಕೊಡಲು ಒಪ್ಪಿದ್ದರಿಂದ ರೈತರು ಕೂಡ ತಮ್ಮ 3300 ರಿಂದ 3200 ದರಕ್ಕೆ ಒಪ್ಪಿಗೆ ಸೂಚಿಸಿ ಹೋರಾಟದ ಫಲವಾಗಿ  ಪ್ರತಿಟನ್ ಕಬ್ಬಿಗೆ 150 ರೂ. ಹೆಚ್ಚುವರಿಯಾಗಿ ದರ ಪಡೆಯುವ ಮೂಲಕ ಆಡಳಿತ ಸೌಧದ ಆವರಣದಲ್ಲಿ ಪಟಾಕಿ ಸಿಡಿಸಿ, ಗುಲಾಲು ಎರಚುವ ಮೂಲಕ ಸಂಭ್ರಮಿಸಿದರು.
ಬೆಳಿಗ್ಗೆ ಎರಡು 10.30 ಕ್ಕೆ ಆರಂಭವಾಗಬೇಕಿದ್ದ ಸಭೆ ಒಂದೂವರೆ ಗಂಟೆಗಳ ಕಾಲ‌ ತಡವಾಗಿ ಆರಂಭವಾಯಿತು ಸಭೆಯಲ್ಲಿ ಮಾತನಾಡಿದ
ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಕಬ್ಬು ಕಟಾವು ಮತ್ತು ಸಾಗಾಣಿಕೆ ದರ (ಎಚ್ ಆ್ಯಂಡ್ ಟಿ) ದರ 2022-23 ರಲ್ಲಿಯೇ ಪ್ರತಿ ಟನ್ ಕಬ್ಬಿಗೆ 893 ರೂ. ಅಧಿಕವಾಗಿದೆ ಎಂದು 54 ದಿನಗಳ ಕಾಲ ಅಹೋರಾತ್ರಿ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಅಂದು ಸರ್ಕಾರದ ಗಮನ ಸೆಳೆದು ಪ್ಯಾರಿ ಕಾರ್ಖಾನೆಯ ತನಿಖೆ ನಡೆದು ಅದು ಸಾಬಿತು ಕೂಡ ಆಗಿದೆ ಆದರೇ ಈಗ ಮತ್ತೇ ಅದಕ್ಕೂ ಹೆಚ್ಚು
950 ರೂ. ತೀರಾ ಹೆಚ್ಚಿನ ದರವಾಗಿದ್ದು ಇದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರ ಸಂಘದ ಹಿತಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್ ಎಸ್ ಜಿವೋಜಿ ಮಾತನಾಡಿ ಹಳಿಯಾಳ, ಅಳ್ನಾವರ, ಧಾರವಾಡ ಮತ್ತು ಕಲಘಟಗಿ ಭಾಗದಲ್ಲಿ  ಕೇವಲ 35 ರಿಂದ 40 ಕೀಮಿ ವ್ಯಾಪ್ತಿಯಲ್ಲಿ 15 ಲಕ್ಷ ಟನ್ ಕಬ್ಬು ಇರುವ ಬಗ್ಗೆ ಕೃಷಿ ಇಲಾಖೆ ಮಾಹಿತಿ ಇದೆ. ಹಳಿಯಾಳದ ಕಾರ್ಖಾನೆ ಕಳೆದ ವರ್ಷ 9 ಲಕ್ಷ 83 ಸಾವಿರ ಟನ್ ಕಬ್ಬು ನುರಿಸಿದೆ ಹೀಗಿರುವಾಗ  ನೂರಾರು ಕೀಮಿ ವ್ಯಾಪ್ತಿ ತೋರಿಸಿ ಏಕೆ ಹೋರಗಿನಿಂದ ಕಬ್ಬು ತಂದು ಆ ದರವನ್ನು ಈ ವ್ಯಾಪ್ತಿಯ ರೈತರಿಗೆ ಹೊರೆಯಾಗಿಸಿ ದರದಲ್ಲಿ ಹಾನಿ ಮಾಡುತ್ತಿದ್ದಾರೆಂದು ಜಿವೋಜಿ ಪ್ರಶ್ನೀಸಿದರು.
ಎಫ್ ಆರ್ ಪಿ ದರದಲ್ಲಿ ಒಂದೊಂದು ರೂಪಾಯಿ ಲೆಕ್ಕ ಕೆಳುವ ಅಧಿಕಾರ ರೈತನಿಗಿದೆ ಎಂದ ಜಿವೋಜಿ
ಕಾರ್ಖಾನೆಯವರು ಎಚ್ ಆ್ಯಂಡ್ ಟಿ ಎಂಬ ಭೂತದ ಹೆಸರಲ್ಲಿ ಸೂಲಿಗೆ ಮಾಡುವುದನ್ನು ಬಿಡಬೇಕು ಮತ್ತು ರೈತರನ್ನು ಸುಲಿಯುವ
ಲಗಾನಿ ವಿಷಯದಲ್ಲಿ ಲಗಾನಿ ನೀಡುವ ರೈತ, ಟ್ರಾಕ್ಟರ್ ಮಾಲಿಕ, ಕಾರ್ಖಾನೆ ಫೀಲ್ಡ್ ಮನ್ ,  ಮತ್ತು  ಸಕ್ಕರೆ ಕಾರ್ಖಾನೆ ಮುಖ್ಯಸ್ಥನ ಮೇಲೆ ಪ್ರಕರಣ ದಾಖಲಿಸುವ ವ್ಯವಸ್ಥೆ ಆದರೇ ಮಾತ್ರ ಲಗಾನಿ ಎಂಬ ಶಾಪದಿಂದ ರೈತ ಮುಕ್ತನಾಗಲು ಸಾಧ್ಯ ಎಂದರು.
ಬಿಜೆಪಿ ರಾಜ್ಯ ಕಾರ್ಯಾಕಾರಿಣಿ ಸಮಿತಿ ಸದಸ್ಯಾಗಿರುವ ಮಾಜಿ ಶಾಸಕ ಸುನಿಲ್ ಹೆಗಡೆ ಮಾತನಾಡಿ ರೈತರನ್ನು ದೋಚುವ ಲಗಾನಿ ವ್ಯವಸ್ಥೆಗೆ ಬ್ರೇಕ್ ಹಾಕಬೆಕೆಂದರೆ ಪ್ಯಾರಿಯವರು ಮೊದಲು ತಮ್ಮ ಫಿಲ್ಡಮನ್ ಗಳನ್ನು ಹದ್ದು ಬಸ್ತಿನಲ್ಲಿ ಇಡಬೇಕು ಮತ್ತು ಅವರನ್ನು ಕಾಲ ಕಾಲಕ್ಕೆ ಬೆರೆಡೆ ವರ್ಗಾಯಿಸಬೇಕೆಂದು ಆಗ್ರಹಿಸಿದ ಅವರು ಲಗಾನಿ ಸಮಸ್ಯೆಗೆ ಪೋಲಿಸ್ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸಹಾಯವಾಣಿ ತೆರೆದು ತಕ್ಷಣ ಸ್ಪಂದಿಸುವ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸಿದರು. ಇನ್ನೂ ಸಕ್ಕರೆ ಕಾರ್ಖಾನೆಯಿಂದ ಹೊರ ಸೂಸುವ ಹಾರು ಬೂದಿಗೆ ಕಡಿವಾಣ ಹಾಕಿ ಜನರ ಆರೋಗ್ಯದ ಮೇಲಾಗುವ ದುಷ್ಪರಿಣಾಮ‌ ತಪ್ಪಿಸಬೇಕೆಂದು ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ಎಲ್‌ ಘೋಟ್ನೇಕರ ಮಾತನಾಡಿ ರೈತರಿಗೆ ಉತ್ತಮ ದರ ನೀಡಿ, ತೂಕ ಯಂತ್ರದಲ್ಲಿ ಮೊಸ ಮಾಡಬೇಡಿ ಎಂದು ನ್ಯಾಯ ಕೇಳಲು ಕಾರ್ಖಾನೆಗೆ ಹೊದರೆ ಜನಪ್ರತಿನಿಧಿಗಳಾದ ನಮ್ಮ ಮೇಲೆ ಪ್ರಕರಣ ದಾಖಲಿಸುವ ಇವರು ಮೊದಲು ರೈತರು ಮತ್ತು ಜನಪ್ರತಿನಿಧಿಗಳೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳುವುದನ್ನು ಮತ್ತು ಗೌರವ ನೀಡುವುದನ್ನು ಕಲಿಯಬೇಕು ಎಂದು ಸಭೆಯಲ್ಲಿ ಕಾರ್ಖಾನೆಯ ಅಧಿಕಾರಿಗಳ ನಡವಳಿಕೆ ವಿರುದ್ದ ಕೆಂಡ ಕಾರಿದರು.
ಧಾರವಾಡ ಜಿಲ್ಲಾ ಮುಖಂಡರಾದ ಮಹೇಶ ಬೆಳಗಾಂವಕರ ಮತ್ತು ಪರಶುರಾಮ ಎತ್ತಿನಗುಡ್ಡ, ಹಳಿಯಾಳದ  ಪ್ರಕಾಶ ಫಾಕ್ರಿ, ಶಂಕರ ಕಾಜಗಾರ, ಅಶೋಕ ಮೇಟಿ ಮಾತನಾಡಿದರು.
ಇಐಡಿ ಪ್ಯಾರಿ ಕಾರ್ಖಾನೆಯ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಎಂ ಬಾಲಾಜಿ, ಕೆನ್‌ ಹೆಡ್ ರಮೇಶ ರೆಡ್ಡಿ  ಅವರು ರೈತರಿಗೆ ತಾವು 150 ರೂ. ಹೆಚ್ಚುವರಿ ದರ ನೀಡಿದ್ದು ನಮ್ಮ ಕ್ಷೇತ್ರ ವ್ಯಾಪ್ತಿಯ ಕಬ್ಬು ಹೊರಗೆ ಹೋಗದಂತೆ ಇದೆ ಕಾರ್ಖಾನೆಗೆ ಕೊಡುವಂತೆ ಮನವಿ ಮಾಡಿದರು.
ಸುಮಾರು 4 ಗಂಟೆಯ ಸುಧೀರ್ಘ ಸಭೆಯ ಬಳಿಕ 3200 ರೂ. ದರವನ್ನು ಕಾರ್ಖಾನೆ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಡಿಸಿ ಲಕ್ಷ್ಮೀಪ್ರಿಯ ಅವರು ಘೋಷಿಸುತ್ತಿದ್ದಂತೆ ರೈತರು ಡಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿ  ಸಂಭ್ರಮಿಸಿದರು.  ಇದೆ ಮೋದಲ ಬಾರಿ ಡಿಸಿ ಅವರು ರೈತರ ವಿಷಯದಲ್ಲಿ ಎರಡು ಬಾರಿ ಹಳಿಯಾಳಕ್ಕೆ ಬಂದು ಸಭೆ ನಡೆಸಿ ಕೊನೆಗೂ ರೈತರಿಗೂ ನ್ಯಾಯ ಕೊಡಿಸಿ ಕಾರ್ಖಾನೆ ಮತ್ತು ರೈತರ ನಡುವಿನ ಗೊಂದಲ ಬಗೆಹರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ರೈತ ಮುಖಂಡರು ಡಿಸಿ ಮತ್ತು ಪೋಲಿಸ್ ಅಧಿಕಾರಿಗಳನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವ ಸಲ್ಲಿಸಿದರು.