ಜಿಲ್ಲೆ

ಕಬ್ಬು ಬೇಸಾಯದಲ್ಲಿ ಸುಧಾರಿತ ಪದ್ಧತಿ ಅಳವಡಿಸಿಕೊಳ್ಳಿ: ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ತೆಗ್ಗಿ ಸಲಹೆ

ಮಂಡ್ಯ: ಕಬ್ಬಿನ ಬೆಳೆಯಲ್ಲಿ ತಂತ್ರಜ್ಞಾನದ ಮೂಲಕ ಸುಧಾರಿತ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ತೆಗ್ಗಿ ತಿಳಿಸಿದರು.

ಸಾತನೂರು ಫಾರ್ಮ್‌ನ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಕಬ್ಬು ಸಂಶೋಧನಾ ಕೇಂದ್ರ ವತಿಯಿಂದ ಕೆ.ಎಂ.ದೊಡ್ಡಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿ ಹಾಗೂ ಮಳವಳ್ಳಿ ತಾಲೂಕಿನ ಕಗ್ಗಲಿಪುರ, ಪುರಿಗಾಲಿ ಗ್ರಾಮದಲ್ಲಿ ಕಬ್ಬು ಬೆಳೆಗಾರರಿಗೆ ಆಯೋಜಿಸಿದ್ದ ಸುಧಾರಿತ ತಾಂತ್ರಿಕ ಬೇಸಾಯ ಕ್ರಮಗಳ ಕುರಿತ ಒಂದು ದಿನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಬ್ಬಿನ ಸುಧಾರಿತ ಬೇಸಾಯ ಕ್ರಮದಲ್ಲಿ ಜಮೀನು ತಯಾರಿಕೆ, ಬೀಜ ಮತ್ತು ಮಣ್ಣು, ಗೊಬ್ಬರ, ನೀರು ಹಾಗೂ ಕಳೆ ನಿರ್ವಹಣೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.

ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕೀಟ ಶಾಸ್ತ್ರಜ್ಞ ಡಾ.ಮಂಜುನಾಥ್ ಚೌರಡ್ಡಿ, ರೈತರಿಗೆ ಕಬ್ಬಿನ ಬೆಳೆಗೆ ತಗಲುವ ಗೊಣ್ಣೆಹುಳು/ಬೇರುಹುಳುಗಳು ಬೆಳೆಗೆ ಉಂಟು ಮಾಡುವ ನಷ್ಟ ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ವಿಸ್ತಾರವಾಗಿ ತಿಳಿಸಿದರು. ಕಬ್ಬಿನ ತಾಕುಗಳಲ್ಲಿ ಇಲಿಗಳ ಹಾವಳಿಯನ್ನು ನಿಯಂತ್ರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.