ಜಿಲ್ಲೆ

ಕಬ್ಬು ಕ್ರಷಿಂಗ್ ನ. 8 ರಿಂದ ಆರಂಭ

ಹುಬ್ಬಳ್ಳಿ : ರೈತರ ಹಿತದೃಷ್ಟಿಯಿಂದ ಉತ್ತರ ಕರ್ನಾಟಕದ ಕಬ್ಬು ನುರಿಸುವಿಕೆ ಹಂಗಾಮನ್ನು ನ. 15ರಿಂದ ಪ್ರಾರಂಭಿಸಲು ಈ ಹಿಂದೆ ಆದೇಶಿಸಲಾಗಿತ್ತು. ಆದರೆ, ಇದೀಗ ರೈತರ ಮನವಿ ಮೇರೆಗೆ ಕಬ್ಬು ನುರಿಸುವ ಹಂಗಾಮನ್ನು ಏಳು ದಿನ ಮುಂಚೆ, ಅಂದರೆ, ನ. 8 ರಿಂದಲೇ ಆರಂಭಿಸಲು ಸಕ್ಕರೆ ಕಾರ್ಖಾನೆಗಳಿಗೆ ಆದೇಶಿಸಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆಗಷ್ಟ್​ನಲ್ಲಿ ನಡೆದಿದ್ದ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಸಭೆಯಲ್ಲಿ ನ. 15ರಿಂದ ಕಬ್ಬು ನುರಿಸುವಿಕೆ ಆರಂಭಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮನವಿ ಮೇರೆಗೆ ಒಂದು ವಾರ ಮುಂಚಿತವಾಗಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕಬ್ಬು ನುರಿಸುವುದನ್ನು ಆರಂಭಿಸಿವೆ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಏಕಕಾಲಕ್ಕೆ ಸಕ್ಕರೆ ಕಾರ್ಖಾನೆಗಳು ಕಾರ್ಯುರಂಭ ಮಾಡುವುದು ರೂಢಿಯಲ್ಲಿದೆ. ಈ ಮೊದಲಿನ ನಿರ್ಧಾರದ ಬದಲಿಗೆ ನವೆಂಬರ್ 8ರಿಂದಲೇ ಕಬ್ಬು ನುರಿಸುವಿಕೆ ಆರಂಭಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೂ ಮನವಿ ಮಾಡಲಾಗಿತ್ತು. ಆದರೆ, ಆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಮೊದಲಿನ ನಿರ್ಧಾರ ಬದಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ನ.15ರವರೆಗೆ ಕ್ರಷಿಂಗ್ ಆರಂಭಿಸಿದ್ದರೆ ಒಂದು ಎಕರೆಗೆ 50 ರಿಂದ 60 ಟನ್ ಇಳುವರಿ ಬದಲಿಗೆ ಕೇವಲ 25 ರಿಂದ 30 ಟನ್ ಇಳುವರಿ ಬರುವ ಸಾಧ್ಯತೆ ಇದೆ. ವಾಡಿಕೆಯಂತೆ ಅಕೊ್ಟೕಬರ್ ಅಂತ್ಯದೊಳಗೆ ಕ್ರಷಿಂಗ್ ಆರಂಭಿಸಲು ಅನುಮತಿ ನೀಡಬೇಕು ಎಂದು ರೈತರು ಮನವಿ ಮಾಡಿದ್ದರು ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 80 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 7.5 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಈ ಬಾರಿ ಕಬ್ಬಿಗೆ ಪ್ರತಿ ಟನ್​ಗೆ 3,400 ರೂ. ನಿಗದಿಪಡಿಸಲಾಗಿದೆ. ಕಳೆದ ಹಂಗಾಮಿನಲ್ಲಿ 3,150 ರೂ. ನಿಗದಿಪಡಿಸಲಾಗಿತ್ತು. ಸಕ್ಕರೆ ಇಳುವರಿ ಪ್ರಮಾಣ ಶೇ. 9.5 ರಿಂದ ಶೇ. 12ರವರೆಗೆ ಬರುತ್ತದೆ. ಸರಾಸರಿ ಇಳುವರಿ ಪ್ರಮಾಣ ಶೇ. 10.5ರಷ್ಟಿದೆ ಎಂದು ತಿಳಿಸಿದರು.

ಬೆಂಬಲ ಬೆಲೆ : ಬೆಂಬಲ ಬೆಲೆಯಲ್ಲಿ ಸೋಯಾಬಿನ್ ಮತ್ತು ಹೆಸರು ಕಾಳು ಖರೀದಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಸೋಯಾಬೀನ್ ಖರೀದಿ ಅವಧಿಯನ್ನು ನ. 20ರವರೆಗೆ ವಿಸ್ತರಣೆ ಮಾಡಲಾಗಿದೆ. ಇದುವರೆಗೆ 570 ಕ್ವಿಂಟಲ್ ಮಾತ್ರ ಖರೀದಿ ಮಾಡಲಾಗಿದ್ದು, ರೈತರ ಬಳಿ ಇನ್ನೂ ದಾಸ್ತಾನು ಇರುವ ಕಾರಣ 20 ರವರೆಗೆ ಖರೀದಿ ಮಾಡಲಾಗುವುದು. ಹೆಸರು ಕಾಳು ಖರೀದಿ ಅವಧಿಯನ್ನು ನ. 18ರವರೆಗೆ ವಿಸ್ತರಿಸಲಾಗಿದೆ. ಇದುವರೆಗೆ ಪ್ರತಿ ಕ್ವಿಂಟಾಲ್​ಗೆ 8,682 ರೂ. ದರದಲ್ಲಿ 1.93 ಲಕ್ಷ ಕ್ವಿಂಟಾಲ್ ಖರೀದಿ ಮಾಡಲಾಗಿದೆ. ಹೆಚ್ಚಿನ ದಾಸ್ತಾನು ಇರುವ ಕಾರಣ ಖರೀದಿ ಪ್ರಮಾಣ ಹೆಚ್ಚಳ ಮಾಡಲಾಗಿದ್ದು, 38,320 ಟನ್ ಖರೀದಿ ಮಾಡಲು ನಿರ್ಧರಿಸಲಾಗಿದೆ. ಈ ಮೊದಲು 22,215 ಟನ್ ಖರೀದಿ ಮಿತಿಗೊಳಿಸಲಾಗಿತ್ತು ಎಂದು ವಿವರಿಸಿದರು.

ಬೆಂಬಲ ಬೆಲೆಯಲ್ಲಿ ಒಟ್ಟು 6.81 ಲಕ್ಷ ಕ್ವಿಂಟಾಲ್ ಕೊಬ್ಬರಿ ಖರೀದಿ ಮಾಡಲಾಗಿದೆ. ಬೆಲೆ ಕುಸಿದಾಗ ಪ್ರತಿ ಕ್ವಿಂಟಾಲ್​ಗೆ 13,500 ರೂ.ನಂತೆ ಕೊಬ್ಬರಿ ಖರೀದಿ ಮಾಡಲಾಯಿತು. ಬೆಂಬಲ ಬೆಲೆ ಖರೀದಿ ಆರಂಭಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ 15 ಸಾವಿರ ರೂ.ವರೆಗೆ ಏರಿಕೆಯಾಗಿತ್ತು. ಇದೇ ಮೊದಲ ಬಾರಿಗೆ ಬೆಂಬಲ ಬೆಲೆಯಲ್ಲಿ 8 ಕೃಷಿ ಉತ್ಪನ್ನಗಳ ಖರೀದಿ ಮಾಡುತ್ತಿರುವುದು ವಿಶೇಷ. ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಅನುಕೂಲವಾಗಿದ್ದು, ಶೋಷಣೆ ಮುಕ್ತವಾಗಿದೆ. 2023-24ನೇ ಸಾಲಿನಲ್ಲಿ ಅಕೊ್ಟೕಬರ್​ವರೆಗೆ 103 ಕೋಟಿ ರೂ. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿತ್ತು. 2024-25ನೇ ಸಾಲಿನ ನವೆಂಬರ್ ಅಂತ್ಯದ ವೇಳೆಗೆ 205 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ ಎಂದರು.

ರೈತರ ಪಹಣಿಯಲ್ಲಿ ವಕ್ಪ್ ಹೆಸರು ಸೇರಿಕೊಂಡಿರುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ. ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಕೆಲಸವನ್ನು ಸರ್ಕಾರ ಮಾಡುವುದಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಉಪ ಚುನಾವಣೆ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ಖಚಿತ. ಜನರು ಬದಲಾವಣೆ ಬಯಸಿದ್ದು, ಕಾಂಗ್ರೆಸ್​ಪರ ವಾತಾವರಣ ಇದೆ ಎಂದರು.