ಜಿಲ್ಲೆ

ತಾಂತ್ರಿಕತೆ ಅಳವಡಿಸಿಕೊಂಡರೆ ಉತ್ತಮ ಇಳುವರಿ: ಕಬ್ಬು ಬೇಸಾಯಶಾಸಜ್ಞ ಡಾ.ಕೇಶವಯ್ಯ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಬ್ಬು ಬೆಳೆಯಲ್ಲಿ ಪಟ ಬಿಟ್ಟು ಪಟ ತೆಗೆದು ಅಗಲ ಅಂತರ ಪಟವಾಗಿ ಮಾರ್ಪಡಿಸುವುದರ ಜತೆಗೆ ತರಗನ್ನು ನಿರ್ವಹಣೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ವಿ.ಸಿ ಾರ್ಮ್‌ನ ವಲಯ ಕೃಷಿ ಸಂಶೋಧನಾ ಕೇಂದ್ರದ ಕಬ್ಬು ಬೇಸಾಯತಜ್ಞ ಡಾ.ಕೇಶವಯ್ಯ ಸಲಹೆ ನೀಡಿದರು.

ತಾಲೂಕಿನ ಗೊರವಾಲೆ ಗ್ರಾಮದ ಚನ್ನೇಗೌಡ ಎಂಬುವರ ಜಮೀನಿನಲ್ಲಿ ಬೆಳೆಯಲಾದ ಕಬ್ಬು ಬೆಳೆ ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾರ್ಷಿಕವಾಗಿ ಅಂದಾಜು 38 ಸಾವಿರದಿಂದ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದೆ. ಅಂತೆಯೇ 2 ರಿಂದ 3 ಕೂಳೆಬೆಳೆ ಬೆಳೆಯುವುದು ವಾಡಿಕೆಯಲ್ಲಿದ್ದು, ವಿ.ಸಿ.ಎಫ್-0517(ಬಾಹುಬಲಿ) ತಳಿಯು ಶೇ.90 ಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಆವರಿಸಿದೆ. ಆದರೆ ಇತ್ತೀಚಿನ ವರ್ಷದಲ್ಲಿ ಜಿಲ್ಲೆಯಲ್ಲಿ ಕಬ್ಬಿನ ಉತ್ಪಾದಕತೆಯು ಕುಂಠಿತಗೊಂಡಿದ್ದು, ಪ್ರತಿ ಎಕರೆಗೆ ಅಂದಾಜು 40 ಮೆ.ಟನ್ ಗಿಂತ ಕಡಿಮೆ ಇಳುವರಿ ಬರುತ್ತಿದೆ. ಪರಿಣಾಮ ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ. ಆದ್ದರಿಂದ ಕೂಳೆ ಬೆಳೆಯಲ್ಲಿ ಕೆಲವು ತಾಂತ್ರಿಕತೆಗಳನ್ನು ರೈತರು ಅಳವಡಿಸಿಕೊಂಡಲ್ಲಿ ಪ್ರತಿ ಎಕರೆಗೆ 60-70 ಮೆ.ಟನ್ ಇಳುವರಿ ಪಡೆದು ರೈತರು ಆರ್ಥಿಕವಾಗಿ ಸಬಲರಾಗಬಹುದು. ಮಾತ್ರವಲ್ಲದೆ ಕಬ್ಬಿನ ಗುಣಮಟ್ಟ ಉತ್ತಮಗೊಂಡು ಅಧಿಕ ಸಕ್ಕರೆ ಹಾಗೂ ಬೆಲ್ಲದ ಇಳುವರಿ ನಿರೀಕ್ಷಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ 2.5 ರಿಂದ 3 ಅಡಿ ಅಂತರದಲ್ಲಿ ಕಬ್ಬು ನೆಡುವುದು ಪದ್ಧತಿ. ಇದರಿಂದ ತೆಂಡೆಗಳ(ದಸಿ) ಸಂಖ್ಯೆ ಅತಿ ಹೆಚ್ಚಾಗಿದ್ದು, ಅರೆಯುವ ಕಬ್ಬಿನ ಜಲ್ಲೆಗಳ ಸಂಖ್ಯೆ ಹಾಗೂ ತೂಕ ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತಿದೆ. ಉತ್ತಮ ಇಳುವರಿ ಹಾಗು ಗುಣಮಟ್ಟದ ಕಬ್ಬನ್ನು ಪಡೆಯಲು ಅನುಕೂಲವಾಗುವಂತೆ ತನು ಕಬ್ಬು ಕಟಾವಾದ ನಂತರ ಕೂಳೆ ಕಬ್ಬಿನಲ್ಲಿ ಪಟ ಬಿಟ್ಟು ಪಟ ತೆಗೆಯಬೇಕು. ಒಂದು ಎಕರೆ ಕಬ್ಬಿನಲ್ಲಿ ಸುಮಾರು 3-4 ಟನ್‌ನಷ್ಟು ತರಗು ದೊರೆಯುತ್ತದೆ. ಇದನ್ನು ವ್ಯವಸ್ಥಿತವಾಗಿ ಕೂಳೆ ಬೆಳೆಯ ಮಣ್ಣಿಗೆ ಸೇರಿಸಿದಲ್ಲಿ, ಮಣ್ಣಿನ ಸಾವಯವ ಪದಾರ್ಥ ಹಾಗೂ ಪೊಷಕಾಂಶದ ಮಟ್ಟ ಹೆಚ್ಚಾಗುತ್ತದೆ. ತರಗನ್ನು ಎರಡು ಸಾಲಿನ ಮಧ್ಯೆ ಹರಡಿ(ಸಾಲು ಬಿಟ್ಟು ಸಾಲು) ಎಕರೆಗೆ 15 ಕೆ.ಜಿ ಯೂರಿಯಾ, 20 ಕೆ.ಜಿ ಸೂಪರ್ ಾಸ್ಫೇಟ್ ಗೊಬ್ಬರವನ್ನು ನಂತರ 2.0-2.5 ಕೆ.ಜಿ ತರಗು ಕಳಿಸುವ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಸಗಣಿಯೊಂದಿಗೆ ಮಿಶ್ರಣ ಮಾಡಿ ತರಗಿನ ಮೇಲೆ ಹಾಕಬೇಕು. ಇದರಿಂದ ತರಗು ಬೇಗನೆ ಕಳಿಯಲು ಸಹಕಾರಿಯಾಗಿ, ಮಣ್ಣಿನಲ್ಲಿ ತೇವಾಂಶ ಕಾಪಾಡಲು ಹಾಗೂ ಕಳೆಗಳನ್ನು ನಿಯಂತ್ರಿಸಬಹುದು ಎಂದರು.

ಕಬ್ಬು ಕಟಾವಾದ ನಂತರ ಉಳಿದಿರುವ ಉದ್ದ ಕೂಳೆಯನ್ನು ಹರಿತವಾದ ಕುಡುಗೋಲಿನಿಂದ ಒಂದೇ ಹೊಡೆತಕ್ಕೆ ನೆಲಸಮಕ್ಕೆ ಕತ್ತರಿಸಬೇಕು. ಇದರಿಂದ ಒಂದೇ ಸಮಾನಾಗಿ ಮೊಳಕೆ ಒಡೆಯುವುದಲ್ಲದೇ, ಪ್ರಮಾಣವು ಕೂಡ ಗಣನೀಯವಾಗಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಭೂಮಿಯ ಮೇಲ್ಭಾಗದಲ್ಲಿರುವ ಕಣ್ಣುಗಳು ಬೇಗನೆ ಮೊಳಕೆಯೊಡೆಯುವುದರಿಂದ ಕೆಳಭಾಗದ ಕಣ್ಣುಗಳು ಮೊಳಕೆಯೊಡೆಯುವುದನ್ನು ತಡೆಯುತ್ತದೆ. ಇದರಿಂದ ತೆಂಡೆಗಳ ಸಂಖ್ಯೆ ಕಡಿಮೆಯಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಅಲ್ಲದೇ ಮೇಲಿನ ಭಾಗದ ಕಣ್ಣುಗಳಿಂದ ಬೇರುಗಳು ನೆಲದೊಳಕ್ಕೆ ಹೋಗದೇ ಇರುವುದರಿಂದ ಕಬ್ಬು ನೆಲದಲ್ಲಿ ಸರಿಯಾಗಿ ಬೇರೂರುವುದಿಲ್ಲ. ಆದ್ದರಿಂದ ಭೂಮಿಯ ಆಳದಿಂದ ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಿರುವುದಿಲ್ಲ. ಆದ್ದರಿಂದ ಕೂಳೆ ಕೊಚ್ಚುವುದು ಕೂಳೆ ಬೆಳೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಮಾಹಿತಿ ನೀಡಿದರು.

ಇನ್ನು ಕೂಳೆ ಕೊಚ್ಚಿದ ನಂತರ ನೇಗಿಲಿನ ಸಹಾಯದಿಂದ ಸಾಲಿನ ಎರಡು ಪಕ್ಕ ಮಗ್ಗಲನ್ನು ಕೊರೆದು ಮಣ್ಣನ್ನು ಸಡಿಲಗೊಳಿಸುವುದು ಅತ್ಯವಶ್ಯಕ. ಇದರಿಂದ ಮಣ್ಣಿನಲ್ಲಿ ಗಾಳಿಯಾಡಲು ಅನುಕೂಲವಾಗುತ್ತದೆ. ಬೇರಿನ ಬೆಳವಣಿಗೆ ಉತ್ತಮಗೊಂಡು, ಮೊಳಕೆಯ ಪ್ರಮಾಣ ಹೆಚ್ಚುತ್ತದೆ. ಕೂಳೆ ಬೆಳೆಯಲ್ಲಿ ಇಳುವರಿ ಕಡಿಮೆಯಾಗಲು ಅಸಮತೋಲನ ಮತ್ತು ಅಸಮರ್ಪಕ ಪೊಷಕಾಂಶಗಳ ಬಳಕೆಯು ಒಂದು ಕಾರಣ. ಆದ್ದರಿಂದ ಇಲಾಖೆಯಿಂದ ಮಾಹಿತಿ ಪಡೆದು ಗೊಬ್ಬರ ನೀಡಬೇಕು. ಸಾಮಾನ್ಯವಾಗಿ ಕೂಳೆ ಕಬ್ಬಿನಲ್ಲಿ ನಾಟಿ ಕಬ್ಬಿಗಿಂತ ಶೇ.30ರಷ್ಟು ಸಸಿಗಳ ಸಂಖ್ಯೆ ಕಡಿಮೆ. ಕೂಳೆ ಕಬ್ಬಿನ ಸಾಲಿನಲ್ಲಿ 60 ಸೆಂ.ಮೀ ಅಂತರದಲ್ಲಿ ಯಾವುದೇ ಕಬ್ಬಿನ ಸಸಿಗಳು ಕಂಡುಬರದೇ ಇದ್ದಲ್ಲಿ, ಅಂತಹ ಜಾಗದಲ್ಲಿ ಪಿಗ್ಗಿ ನೆಡಬೇಕು. ಇದಲ್ಲದೆ ಕೂಳೆ ಬಿಟ್ಟು ಪ್ರಾರಂಭದಲ್ಲಿ ತರಗು ಮಡಚಿ, ಕೂಳೆ ಕೊಚ್ಚಿ ಮಗ್ಗಲು ಕೊರೆದ ನಂತರ ನೀರು ಹಾಯಿಸಬೇಕು. ಕವಲೊಡೆಯುವ ಹಂತದಲ್ಲಿ ನೀರಿನ ಅವಶ್ಯಕತೆ ಹೆಚ್ಚು. ಮಣ್ಣು ಮತ್ತು ವಾತಾವರಣಕ್ಕನುಗುಣವಾಗಿ 8-15 ದಿನಗಳ ಅಂತರದಲ್ಲಿ ನೀರು ಹಾಯಿಸಬೇಕಾಗುತ್ತದೆ. ಕಟಾವು ಮಾಡುವ 15 ದಿನ ಮುಂಚಿತವಾಗಿ ನೀರು ತಪ್ಪಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.

ವಿ.ಸಿ ಾರ್ಮ್ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಆಶಾ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ ಇದ್ದರು.