ಭಾರಿ ಗಾಳಿ-ಮಳೆಗೆ ಕಬ್ಬಿನ ಬೆಳೆ ನೆಲಕಚ್ಚಿರುವುದು. 
ಜಿಲ್ಲೆ

ಮಳೆ-ಗಾಳಿಗೆ ಹಾಳಾದ ಕಬ್ಬು ಬೆಳೆ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ(ಗ್ರಾ): ತಾಲೂಕಿನ ಕಂದಗಲ್ಲ ಗ್ರಾಮದ ಗೋತಗಿ ರಸ್ತೆಗೆ ಹೊಂದಿಕೊಂಡಿರುವ ಹಸನಸಾಬ್ ಪಿಂಜಾರ ಅವರ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಭಾರಿ ಗಾಳಿ-ಮಳೆಗೆ ಬಹುತೇಕ ಹಾಳಾಗಿದೆ.

5 ಎಕರೆ 4 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಸಿಕ್ಕು ಹಾನಿಯಾಗಿದೆ. ಅಂದಾಜು ಅರ್ಧದಷ್ಟು ನೆಲಕ್ಕೆ ಬಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಸಾಲ ಮಾಡಿ ಭೀಕರ ಬಿರು ಬಿಸಿಲಿನಲ್ಲಿಯೂ ಕಬ್ಬಿನ ಬೆಳೆ ಜೋಪಾನ ಮಾಡಿ ಇನ್ನೇನೂ ಎರಡು-ಮೂರು ತಿಂಗಳಲ್ಲಿ ಸಲು ಪಡೆದುಕೊಳ್ಳುವ ಉತ್ಸಾಹದಲ್ಲಿದ್ದ ರೈತನಿಗೆ ಈಗ ಬರ ಸಿಡಿಲು ಬಡಿದಂತಾಗಿದೆ. ಈ ಭಾಗದಲ್ಲಿ ಒಣಬೇಸಾಯ ಜಮೀನಿದ್ದು, ರೈತ ಹಸನಸಾಬ್ ಅವರು ಅಪಾರ ಹಣ ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ ಕಬ್ಬು ಬೆಳೆದಿದ್ದಾರೆ.

ಜೀವನವನ್ನೇ ಕೃಷಿಗಾಗಿ ಮುಡಿಪಿಟ್ಟ ಪಿಂಜಾರ ಕುಟುಂಬ ಹೊಲದಲ್ಲಿಯೇ ಮನೆ ಮಾಡಿ, ದನಕರುಗಳನ್ನು ಸಾಕುತ್ತ ಜೀವನ ಸಾಗಿಸುತ್ತಿದ್ದು, ಈಗ ಏಕಾಏಕಿ ಎರಗಿ ಬಂದ ಪ್ರಕೃತಿ ವಿಕೋಪದಿಂದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಸಂಬಂದಪಟ್ಟ ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡಿ ಸರ್ಕಾರದಿಂದ ಸಿಗುವ ಪರಿಹಾರ ಒದಗಿಸಿಕೊಡಬೇಕು ಎಂದು ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಗುರು ಗಾಣಿಗೇರ ಆಗ್ರಹಿಸಿದ್ದಾರೆ.

ಇಡೀ ಕುಟುಂಬ ವರ್ಗದವರು ಕೃಷಿಯಲ್ಲೇ ತೊಡಗಿದ್ದೇವೆ. ಕಬ್ಬಿನ ಬೆಳೆಯನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸಿದ್ದೇವು. ಭಾರಿ ಮಳೆಗೆ ಸಲು ನೆಲ ಕಚ್ಚಿ ಬಿದ್ದಿದ್ದು ಮನಸ್ಸಿಗೆ ನೋವುಂಟು ಮಾಡಿದೆ.
ಹಸನಸಾಬ್ ಪಿಂಜಾರ, ರೈತ