ಜಿಲ್ಲೆ

ಕಬ್ಬಿನ ಹೊಲಕ್ಕೆ ನುಗ್ಗಿದ ಗಜಪಡೆ

Dharwad

ಕಲಘಟಗಿ: ತಾಲೂಕಿನ ಗುಡ್ಡದ ಅಂಚಿನಲ್ಲಿರುವ ಬೀರವಳ್ಳಿ ಗ್ರಾಮದ ಕಬ್ಬಿನ ಹೊಲವೊಂದರಲ್ಲಿ ಬುಧವಾರ 6 ಆನೆಗಳು ಪ್ರತ್ಯಕ್ಷವಾದವು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಬ್ಬಿನ ಹೊಲಕ್ಕೆ ನುಗ್ಗಿದ ಆನೆಗಳ ಹಿಂಡು ಕಂಡ ಬೀರವಳ್ಳಿ ಗ್ರಾಮದ ರೈತರು ಹೆದರಿ ಓಡಿಹೋಗಿದ್ದಾರೆ.

ಕಲಘಟಗಿ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಆನೆಗಳ ಹಿಂಡನ್ನು ಸಂಜೆ 6 ಗಂಟೆಗೆ ಮರಳಿ ಕಾಡಿಗೆ ಕಳುಹಿಸಿದರು.

‘ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕಡೆಯಿಂದ ಬೀರವಳ್ಳಿ ಗ್ರಾಮಕ್ಕೆ ಆನೆಗಳು ಆಗಮಿಸಿವೆ. ಅವುಗಳಿಂದ ಯಾವುದೇ ಅಪಾಯ, ಬೆಳೆ ಹಾನಿ ಸಂಭವಿಸಿಲ್ಲ. ಹಲವು ದಿನಗಳಿಂದ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಬೀರವಳ್ಳಿ, ಕಂದ್ಲಿ, ಡುಮಗೊಳ್ಳಿ ಭಾಗದಲ್ಲಿ ಆನೆಗಳ ಸಂಚಾರ ಕಂಡುಬಂದಲ್ಲಿ ನಮ್ಮ ಗಮನಕ್ಕೆ ತರಬೇಕು. ರೈತರು ಭಯಪಡಬಾರದು’ ಎಂದು ಶ್ರೀಕಾಂತ ಪಾಟೀಲ ತಿಳಿಸಿದ್ದಾರೆ. ಉಪ ವಲಯ ಅರಣ್ಯಾಧಿಕಾರಿಗಳಾದ ಎಂ.ವೈ. ಚಲವಾದಿ, ಆರ್.ಜೆ. ಕಡೆಮನಿ, ಅರಣ್ಯ ರಕ್ಷಕರಾದ ಉಮೇಶ ಕಡಿ, ಮೌಸಿನ್, ಮಹಾಂತೇಶ ತೇಲಿ, ನಾಗರಾಜ ಇದ್ದರು.