ಚನ್ನರಾಯಪಟ್ಟಣ: ತಾಲೂಕಿಗೆ ರೈತರ, ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯ ಸಮಗ್ರ ಅಭಿವೃದ್ಧಿಗೆ ರೈತರು ಸಹಕರಿಸಬೇಕು ಎಂದು ಶಾಸಕ ಬಾಲಕೃಷ್ಣ ಮನವಿ ಮಾಡಿದರು.
ತಾಲೂಕಿನ ಶ್ರೀನಿವಾಸಪುರದಲ್ಲಿನ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಗೆ ಶುಕ್ರವಾರ ಮುಂಜಾನೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವಲ್ಲಿ ಮುಂದಾಗಬೇಕು. ಕಬ್ಬು ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಿತ್ತನೆ ಬೀಜವನ್ನು ಸಾಲದ ರೂಪದಲ್ಲಿ ಕೊಡಲಾಗುವುದು. ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಸಹಾಯಧನವನ್ನು ಕಾರ್ಖಾನೆಯಿಂದ ನೀಡಲಾಗುತ್ತಿದೆ. ಕಬ್ಬು ಕಟಾವಿನ ವಿಚಾರದಲ್ಲಿ ತೊಂದರೆಯಾಗದ ರೀತಿಯಲ್ಲಿ 300 ಗುಂಪುಗಳ ಕಾರ್ಮಿಕರನ್ನು ಕರೆತರಲಾಗಿದೆ, ಯಾವುದೇ ಸಮಸ್ಯೆಗೆ ಆಸ್ಪದ ಕೊಡದ ರೀತಿಯಲ್ಲಿ ಕಾರ್ಖಾನೆ ಅಭಿವೃದ್ಧಿಗೆ ರೈತರು ಮುಂದಾಗಬೇಕೆಂದರು.
ಕಬ್ಬು ನುರಿಸುವಿಕೆಗೆ ಚಾಲನೆ ನೀಡಲಾಗಿದ್ದು, ದಿನವಹಿ 3ಸಾವಿರ ಟನ್ ಕಬ್ಬು ಅರೆಯುವ ಮೂಲಕ ರೈತರು ಬೆಳೆದ ಫಸಲಿಗೆ ಮೌಲ್ಯ ನೀಡಲಾಗುವುದು. 5ಲಕ್ಷ ಟನ್ ಕಬ್ಬನ್ನು ಅರೆಯುವಿಕೆಗೆ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಮುಂದಾಗಿದೆ. ನಮ್ಮ ತಾಲೂಕು ವ್ಯಾಪ್ತಿಯಲ್ಲಿ 4 ಲಕ್ಷ ಟನ್ ಕಬ್ಬು ಬೆಳೆಯಲಾಗಿದೆ. ಹೆಚ್ಚುವರಿಯಾಗಿ ಅವಶ್ಯವಿರುವ ಇನ್ನೊಂದು ಟನ್ ಕಬ್ಬನ್ನು ಪಕ್ಕದ ಜಿಲ್ಲೆಗಳಿಂದ ತರಿಸಿಕೊಳ್ಳವಲ್ಲಿ ಕಾರ್ಖಾನೆ ಮುಂದಾಗಿದೆ. ಪೂರ್ವ ಮುಂಗಾರು ಶೀಘ್ರ ಆರಂಭವಾಗಿರುವುದರಿಂದ ಇಳುವರಿಯೂ ಉತ್ತಮವಾಗಿರಲಿದೆ ಎಂದು ಬಾಲಕೃಷ್ಣ ಹೇಳಿದರು.
ಕಳೆದ ಸಾಲಿನಲ್ಲಿ ಎರಡು ತಿಂಗಳು ತಡವಾಗಿ ಕ್ರಷಿಂಗ್ ಆರಂಭವಾಗಿದೆ. ಈ ಬಾರಿ ಸಕ್ಕರೆ ಸಚಿವರನ್ನು ಮನವಿ ಮಾಡಿದ ಮೇರೆಗೆ ಎರಡು ತಿಂಗಳು ಮುಂಚಿತವಾಗಿ ಕಾರ್ಖಾನೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 3,221 ರೂ ನಿಗದಿಯಾಗಿದೆ. ಬೆಂಬಲ ಬೆಲೆ ಹೆಚ್ಚಿಗೆ ಮಾಡುವಂತೆ ಇದೇ ಸಂದರ್ಭ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಈ ವೇಳೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್. ವೆಂಕಟೇಶ್, ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಸಿ.ಸಿ.ರವೀಶ, ಮುತ್ತಿಗೆ ರಾಜೇಗೌಡ, ನಾರಾಯಣಗೌಡ, ಶಿವಣ್ಣ, ಯೋಗಣ್ಣ, ನಾರಾಯಣ್, ಜಯರಾಂ, ರವಿ, ಲಕ್ಷ್ಮೀ, ಭಾರತಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಘಟಕದ ಉಪಾಧ್ಯಕ್ಷ ಪೂರ್ಣಸ್ವಾಮಿ, ಸಿಡಿಒ
ದೇವೇಗೌಡ ಭಾಗವಹಿಸಿದ್ದರು.