ಜಿಲ್ಲೆ

ಶಿರಹಟ್ಟಿ ಫಕೀರೇಶ್ವರ ಶ್ರೀಮಠಕ್ಕೆ ಸೂಫಿ ಸಂತರ ಭೇಟಿ

ಶಿರಹಟ್ಟಿ: ಹದಿನೈದನೇ ಶತಮಾನದ ವಿಜಯಪುರದ ಖಾಜಾ ಅಮೀನ್ ಧಿನರು ಹಿಂದು-ಮುಸ್ಲಿಂ ಧರ್ಮದ ತತ್ವಗಳೆರಡನ್ನೂ ಅರಿತವರಾಗಿದ್ದರು ಎಂದು ಶಿರಹಟ್ಟಿ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಪಟ್ಟಣದ ಫಕೀರೇಶ್ವರ ಮಠಕ್ಕೆ ಭೇಟಿ ನೀಡಿದ ಕಲಬುರಗಿಯ ಹಜರತ್ ಸ್ವಾಜಾ ಬಂದಾನವಾಜ ದರ್ಗಾದ ಹಾಫೀಜ್ ಸೈಯ್ಯದ ಮೊಹಮ್ಮದ ಅಲಿ ಅಲ್-ಹುಸೈನಿ ಸಜ್ಜಾದಾ ನಶೀನ್ ಮತ್ತು ಮುತವಲ್ಲಿ ಸೂಫಿ ಸಂತರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ವಿಜಯಪುರದ ಖಾಜಾ ಅಮೀನ್ ಧಿನರು ಶಿರಹಟ್ಟಿ ಕರ್ತೃ ಶ್ರೀ ಫಕೀರೇಶ್ವರ ಅವರಿಗೆ 15ನೇ ಶತಮಾನದಲ್ಲಿ ದೀಕ್ಷೆ ನೀಡಿದರು. ದ್ವೇಷ ಬಿಡು, ಪ್ರೀತಿ ಮಾಡು’ ಇದು ಕರ್ತೃಗಳ ದಿವ್ಯ ಸಂದೇಶ. ಮಠದ ಒಂದು ಭಾಗ ಹಿಂದು ವಾಸ್ತು ಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ರೂಪಗೊಂಡಿದ್ದರೆ, ಇನ್ನೊಂದು ಭಾಗ ಮುಸ್ಲಿಂ ವಾಸ್ತುಶಿಲ್ಪ ಶೈಲಿಯಲ್ಲಿ ರೂಪುಗೊಂಡಿದೆ. ಒಂದೆಡೆ ಹರಹರ ಮಹಾದೇವ ಎಂಬ ಮಂತ್ರ ಘೊಷ ಮೊಳಗಿದರೆ, ಇನ್ನೊಂದೆಡೆ ಫಕೀರೇಶ್ವರಕೀ ದೋಸ್ತ ಹರಹರಾ ವೋ ಧೀನ್ ಎಂಬ ಮಂತ್ರ ಘೊಷ ಮೊಳಗುತ್ತದೆ. ಒಂದೆಡೆ ಅಗರ ಬತ್ತಿಗಳ ಸುವಾಸನೆ, ಮತ್ತೊಂದೆಡೆ ಊದಿನ ಪರಿಮಳ ಹೊಮ್ಮುತ್ತದೆ. ಧ್ವಜದಲ್ಲಿ ಹಿಂದು-ಮುಸ್ಲಿಂ ಎರಡು ಸಂಕೇತಗಳು ಕಂಡು ಬರುತ್ತವೆ ಎಂದರು.

ಹಜರತ ಸ್ವಾಜಾ ಬಂದಾನವಾಜ ದರ್ಗಾದ ಹಾಫೀಜ್ ಸೈಯ್ಯದ ಮೊಹಮ್ಮದ ಅಲಿ ಅಲ್-ಹುಸೈನಿ ಸಜ್ಜಾದಾ ನಶೀನ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಸುಜಾತ ದೂಡ್ಡಮನಿ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ್ ಮಾಗಡಿ, ಮಾಬುಸಾಬ ಲಕ್ಷೆ್ಮೕಶ್ವರ, ಎಸ್.ಡಿ. ಮಕಾಂದರ, ದೇವಕ್ಕ ಗುಡಿಮನಿ, ಚಾಂದಸಾಬ್ ಮುಳಗುಂದ, ಹೂನ್ನಪ್ಪ ಶಿರಹಟ್ಟಿ, ಪರಮೇಶ ಪರಬ, ಮುತ್ತು ಬಾವೀಮನಿ, ಅಜ್ಜಪ್ಪ ಪಾಟೀಲ, ಅನಂದ ಕೋಳಿ ಇತರರಿದ್ದರು.