ಮೈಸೂರು: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಉಸಿರುಗಟ್ಟಿದ ವಾತಾವರಣ ಇದೆ ಎಂದು ಮಾಜಿ ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ 2013-2018ರವರೆಗೆ ಇದ್ದಂತಹ ಸರ್ಕಾರದಲ್ಲಿನ ವ್ಯವಸ್ಥೆ ಈಗ ಕಾಣಿಸುತ್ತಿಲ್ಲ. ಸರ್ಕಾರದಿಂದ ನನ್ನ ಕ್ಷೇತ್ರಕ್ಕೆ ಈವರೆಗೂ ಒಂದು ಪೈಸೆ ಹಣ ಬಂದಿಲ್ಲ. ನಾನು ಭೂಮಿಪೂಜೆ ಮಾಡಿದ ಕೆಲಸ ಕಾರ್ಯಗಳು ಕೂಡ ಮುಂದುವರಿಯುತ್ತಿಲ್ಲ. ಅಧಿಕಾರಿಗಳಿಗೂ ಕೆಲಸ ಮಾಡಲು ಉಸಿರುಗಟ್ಟಿದ ವಾತಾವರಣ ಇದೆ ಎಂದರು.
ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದು ಈಗ ಗೊತ್ತಾಗುತ್ತಿದೆ. ಘಟನೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿ ತೆಗೆದುಕೊಳ್ಳಬೇಕಿದೆ. ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಗುರುತಿಸಿ ಅವರ ತಲೆದಂಡವಾಗಬೇಕಿದೆ. ಒಟ್ಟಿನಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿದ್ದ ವ್ಯವಸ್ಥೆಗಳು ಈಗ ಇಲ್ಲ ಎಂಬುದು ಬಹಿರಂಗವಾಗಿದ್ದು, ಇದೆಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಎಚ್.ಡಿ.ದೇವೇಗೌಡರು ಖಡಕ್ ಎಚ್ಚರಿಕೆ ನೀಡಿದ್ದು, ಅದರಂತೆ ಪ್ರಜ್ವಲ್ ರೇವಣ್ಣ ಈಗಾಗಲೇ ಬರಬೇಕಿತ್ತು. ಆದರೆ, ಇದೀಗ ಬರುವುದಾಗಿ ಹೇಳಿದ್ದಾರೆ. ಈ ನೆಲದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ ಅವರು ಬಂದ ನಂತರದಲ್ಲಿ ಸತ್ಯಾಸತ್ಯತೆ ಏನೆಂಬುದು ಗೊತ್ತಾಗಲಿದೆ. ನಾವು ಸಹ ಅದನ್ನೇ ಕಾಯುತ್ತಿದ್ದೇವೆ. ಆದರೆ ಪ್ರಜ್ವಲ್ ವಿಚಾರದಲ್ಲಿ ಮಾತನಾಡಲು ಈಗಲೂ ನನಗೆ ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿದರು.
ಎಚ್.ಡಿ.ರೇವಣ್ಣ ಬಂಧನ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ ಎಂದು ಹಿಂದೆಯೇ ಹೇಳಿದ್ದೇನೆ. ಈ ವಿಚಾರದಲ್ಲಿ ಎಸ್‌ಐಟಿ ಅಧಿಕಾರಿಗಳು ಹೇಗೆ ವರ್ತಿಸಿದರು, ಯಾರ ಒತ್ತಡದಲ್ಲಿ ಏನೇನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.
ಯಾವುದೇ ವ್ಯಕ್ತಿ ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡಿದಾಗ ಅದರಲ್ಲಿ ಅವರ ವೈಯಕ್ತಿಕ ವಿಚಾರ ಸಹ ಇರಲಿದೆ. ಆದರೆ, ಎಲ್ಲವನ್ನೂ ಪಕ್ಷಕ್ಕೆ ಅಂಟಿಸುವುದು ಅಥವಾ ಪಕ್ಷವನ್ನೇ ಜವಾಬ್ದಾರಿಯನ್ನಾಗಿ ಮಾಡುವುದು ಸರಿಯಲ್ಲ. ಎಲ್ಲ ಪಕ್ಷದಲ್ಲೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ ಎಂದರು.
ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು ಈಗಾಗಲೇ ಕಾಂಗ್ರೆಸ್‌ನ ಉದ್ದೇಶ ಏನೆಂದು ಹೇಳಿದ್ದಾರೆ. ನಮಗೆ ವಿಶ್ವಾಸ ಇದೆ. ದೇಶದಲ್ಲಿ ನರೇಂದ್ರ ಮೋದಿ ಹಾಗೂ ಎಚ್.ಡಿ.ದೇವೇಗೌಡ, ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರೊಂದಿಗೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಈ ಚುನಾವಣೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.